ಹುಬ್ಬಳ್ಳಿ: ಮನುಷ್ಯರು ಸತ್ತರೆ, ಶವಕ್ಕೆ ಸಿಂಗಾರ ಮಾಡಿ, ಪಟಾಕಿ ಹಾರಿಸುತ್ತ, ಹೊಲದಲ್ಲಿ ಸಮಾಧಿ ತೆಗೆದು ಅಂತ್ಯಕ್ರಿಯೆ ಮಾಡುತ್ತಾರೆ. ಅದೇ ರೀತಿ ಇಲ್ಲೊಂದು ಪ್ರಾಣಿಗೆ ಈ ಗ್ರಾಮದ ಜನರು ಅಂತ್ಯಕ್ರಿಯೆ ಮಾಡಿ ಮಾನವೀಯತೆ ಮೆರೆದಿದ್ದಾರೆ. ಹಾವು ಕಚ್ಚಿದ್ದರಿಂದ ಸತ್ತ ಶ್ವಾನಕ್ಕೆ ತಿಥಿ ಕಾರ್ಯ ನೇರವೇರಿಸಿದ್ದಾರೆ.
ಕಳೆದ ಮೂರು ದಿನಗಳ ಹಿಂದೆ, ಶ್ವಾನವೊಂದಕ್ಕೆ ಹಾವು ಕಚ್ಚಿದ್ದರಿಂದ ಸಾವನ್ನಪ್ಪಿತ್ತು. ಸತ್ತು ಹೋದ ಆ ಶ್ವಾನವನ್ನು ಆ ಗ್ರಾಮದ ಜನರು ಮನುಷ್ಯರಂತೆ ಅಂತ್ಯಕ್ರಿಯೆ ಮಾಡಿದ್ದಾರೆ. ಹುಬ್ಬಳ್ಳಿ ತಾಲ್ಲೂಕಿನ ಅದರಗುಂಚಿ ಗ್ರಾಮದ ಜನರು ಕೇವಲ ಅಂತ್ಯಕ್ರಿಯೆ ಮಾಡಿದ್ದಷ್ಟೇ ಅಲ್ಲದೇ ಪೆಂಡಾಲ್ ಹಾಕಿ ತಿಥಿ ಕಾರ್ಯ ಮಾಡಿದ್ದಾರೆ.
ಗ್ರಾಮದಲ್ಲಿ ಓಡಾಡಿಕೊಂಡಿದ್ದ ಶ್ವಾನ, ಹೊಸಬರು ಬಂದರೆ ಜನರನ್ನು ಎಚ್ಚರಗೊಳಿಸಿ ಗ್ರಾಮದ ಜನರ ಪ್ರೀತಿ ಪಾತ್ರವಾಗಿತ್ತು. ಹಾವು ಕಚ್ಚಿದ್ದರಿಂದ ಸಾವನ್ನಪ್ಪಿದ ಶ್ವಾನವನ್ನು ಕಳೆದುಕೊಂಡ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.
ಯಾವುದಾದರೊಂದು ಪ್ರಾಣಿ ಸತ್ತರೆ ಕ್ಯಾರೆ ಮಾಡದ ಇಂದಿನ ಕಾಲದಲ್ಲಿ ಈ ಗ್ರಾಮದ ಜನರು ಒಂದು ಬೀದಿ ನಾಯಿ ಸತ್ತು ಹೋದರೆ ಇಷ್ಟೊಂದು ಪ್ರೀತಿ ತೋರಿಸಿ ಮಾನವೀಯತೆಯನ್ನು ತೋರಿದ್ದಾರೆ. ಈ ಶ್ವಾನಕ್ಕೆ ಹಾವು ಕಡಿದ ತಕ್ಷಣ ಅದನ್ನು ನೋಡಿದ ಕೆಲ ಜನರು ಆಸ್ಪತ್ರೆಗೆ ತೆಗೆದುಕೊಂಡು ಹೋಗಲು ಪ್ರಯತ್ನಿಸಿದ್ದಾರೆ. ಆದರೆ ಶ್ವಾನದ ಪ್ರಾಣ ಉಳಿಯಲಿಲ್ಲ. ಹೀಗಾಗಿ ಗ್ರಾಮಸ್ಥರು ಗ್ರಾಮದಲ್ಲಿ ಅಂತ್ಯಕ್ರಿಯೆ ಮಾಡಿದ್ದಾರೆ.
ಒಟ್ಟಿನಲ್ಲಿ ಕೆಲವೊಂದು ಸಮಯದಲ್ಲಿ ಕಣ್ಣ ಮುಂದೆ ಅದೆಷ್ಟೋ ಪ್ರಾಣಿಗಳು ಹಲವಾರು ಕಾರಣಗಳಿಂದ ಪ್ರಾಣ ಕಳೆದುಕೊಳ್ಳುತ್ತವೆ. ಆದರೆ ಕೆಲ ಜನರು ನೋಡಿದ್ರೂ ನೋಡದಂತೆ ಮುಂದೆ ಹೋಗುತ್ತಾರೆ. ಇಂತಹ ಸಮಯದಲ್ಲಿ ಈ ಗ್ರಾಮದ ಜನರು ಬೀದಿನಾಯಿಗೆ ಮನುಷ್ಯರಂತೆ ಅಂತ್ಯಕ್ರಿಯೆ ಮಾಡಿದ್ದು, ಗ್ರಾಮದ ಜನರ ಕಾರ್ಯಕ್ಕೆ ಮೆಚ್ಚುಗೆ ಕೂಡ ವ್ಯಕ್ತವಾಗುತ್ತಿದೆ.
Kshetra Samachara
13/01/2021 08:30 pm