ವರದಿ:ಮಲ್ಲೇಶ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
ಹುಬ್ಬಳ್ಳಿ: ಮಹಿಳೆ ಅಬಲೆಯಲ್ಲ ಸಬಲೆ ಎಂಬುವುದನ್ನು ಪ್ರತಿಯೊಂದು ಕ್ಷೇತ್ರದಲ್ಲಿಯೂ ಕೂಡ ಸಾಬೀತು ಪಡಿಸುತ್ತಾ ಬಂದಿದ್ದಾಳೆ. ಮಹಿಳೆಯರ ಕಾರ್ಯಕ್ಷಮತೆ ಹಾಗೂ ಕಾರ್ಯದಕ್ಷತೆಯನ್ನು ಪರಿಚಯಿಸುವ ಸದುದ್ದೇಶದಿಂದ ನೈಋತ್ಯ ರೈಲ್ವೆ ವಿನೂತನ ಕಾರ್ಯಕ್ರಮಕ್ಕೆ ಮುಂದಾಗಿದೆ.
ಹೌದು.ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ನೈಋತ್ಯ ರೈಲ್ವೆ ವಲಯ ಹುಬ್ಬಳ್ಳಿ ವಿಭಾಗದಿಂದ ವಿಶಿಷ್ಟ ರೀತಿಯಲ್ಲಿ ಆಚರಣೆ ಮಾಡಲಾಯಿತು. ಮಹಿಳೆಯರ ಸಾಮರ್ಥ್ಯವನ್ನು ಪ್ರದರ್ಶಿಸುವ ನಿದರ್ಶನಕ್ಕೆ ಈ ಮಹಿಳಾ ದಿನಾಚರಣೆ ಸಾಕ್ಷಿಯಾಗಿತು. ಅಂತರಾಷ್ಟ್ರೀಯ ದಿನಾಚರಣೆ ಅಂಗವಾಗಿ ಹುಬ್ಬಳ್ಳಿಯ ರೈಲ್ವೆ ನಿಲ್ದಾಣದಿಂದ ಮಹಿಳಾ ಲೋಕೋಪೈಲೆಟ್, ಮಹಿಳಾ ಟಿಕೆಟ್ ಪರಿಶೀಲಕರು, ಮಹಿಳಾ ಆರ್.ಪಿ.ಎಫ್, ಮಹಿಳಾ ಸ್ಟೇಷನ್ ಮಾಸ್ಟರ್ ಹೀಗೆ ಎಲ್ಲರೂ ಭಾಗವಹಿಸುವ ಮೂಲಕ ಹುಬ್ಬಳ್ಳಿಯಿಂದ ಕಾರಟಗಿಯವರೆಗೆ ಮಹಿಳೆಯರೇ ರೈಲನ್ನು ಚಲಾಯಿಸಿದರು. ಇಂತಹ ಕಾರ್ಯಕ್ರಮಕ್ಕೆ ವಾಣಿಜ್ಯನಗರಿ ಹುಬ್ಬಳ್ಳಿಯ ರೈಲ್ವೆ ನಿಲ್ದಾಣ ಸಾಕ್ಷಿಯಾಗಿದೆ.
ಇನ್ನೂ ಮಹಿಳಾ ದಿನಾಚರಣೆ ಪ್ರಯುಕ್ತ ಮಹಿಳೆಯರು ಚಲಾಯಿಸುತ್ತಿದ್ದ ಮಹಿಳೆಯರ ನೇತೃತ್ವದ ರೈಲಿಗೆ ನೈಋತ್ಯ ರೈಲ್ವೆ ವಲಯದ ವ್ಯವಸ್ಥಾಪಕ ನಿರ್ದೇಶಕರಾದ ಸಂಜೀವ ಕಿಶೋರ್ ಚಾಲನೆ ನೀಡಿದರು. ನೈಋತ್ಯ ರೈಲ್ವೆ ವಲಯದಲ್ಲಿ ಮಹಿಳೆಯರಿಗಾಗಿಯೇ ವಿಶೇಷವಾಗಿ ಆಚರಣೆ ಮಾಡುತ್ತಿರುವ ಈ ಕಾರ್ಯಕ್ರಮ ಸಾಕಷ್ಟು ಸಾರ್ವಜನಿಕ ಪ್ರಶಂಸೆಗೆ ಪಾತ್ರವಾಯಿತು. ಎಲ್ಲೆಂದರಲ್ಲಿ ಮಹಿಳೆಯರೇ ಕಾಣಿಸಿಕೊಂಡಿದ್ದು, ನಿಜಕ್ಕೂ ರೈಲ್ವೆ ನಿಲ್ದಾಣದ ಮೆರಗನ್ನು ಹೆಚ್ಚಿಸಿತು.
ಒಟ್ಟಿನಲ್ಲಿ ನೈಋತ್ಯ ರೈಲ್ವೆ ವಲಯ ಮಹಿಳಾ ದಿನಾಚರಣೆಗೆ ಹೊಸ ಮೆರಗನ್ನು ತಂದಿದ್ದು, ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಗೆ ಅರ್ಥ ಕಲ್ಪಿಸಿದ್ದಂತೂ ಸತ್ಯ.
Kshetra Samachara
08/03/2022 05:19 pm