ಕುಂದಗೋಳ: ರಷ್ಯಾ ಮಿಲಿಟರಿ ದಾಳಿ ಎದುರಿಸುತ್ತಿರುವ ಉಕ್ರೇನ್‌ನಲ್ಲಿ ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದ ವಿದ್ಯಾರ್ಥಿನಿಯೋರ್ವಳು ಸಿಲುಕಿದ್ದಾಳೆ. ಸದ್ಯ ಆಕೆ ತನ್ನ ಪೋಷಕರೊಂದಿಗೆ ಸಂಪರ್ಕದಲ್ಲಿದ್ದಾಳೆ ಎಂದು ತಿಳಿದುಬಂದಿದೆ.
ಹೌದು ! ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದ ಚೈತ್ರಾ ಎಂಬ ವಿದ್ಯಾರ್ಥಿನಿ ಕಳೆದ ಮೂರು ವರ್ಷದಿಂದ ಉಕ್ರೇನ್‌ನಲ್ಲಿ ವಾಸವಿದ್ದು ಸರ್ಕಾರಿ ಕೋಟಾದಡಿ ಎಂಬಿಬಿಎಸ್ ಮೂರನೇ ಸೆಮಿಸ್ಟರ್ ಓದುತ್ತಿದ್ದಾರೆ. ಭಾರತಕ್ಕೆ ಮರಳಲು ಸಿದ್ಧವಾಗಿದ್ದ ಚೈತ್ರಾ ಅವರು ಇದೀಗ ಉಕ್ರೇನ್ ಸರ್ಕಾರದ ಅಧೀನದಲ್ಲಿ ಕ್ಷೇಮವಾಗಿದ್ದು, ಮರಳಿ ಭಾರತಕ್ಕೆ ಬರುವ ವೇಳೆ ವಿಮಾನ ನಿಲ್ದಾಣದ ಮೇಲೆ ದಾಳಿ ನಡೆದ ಪರಿಣಾಮ ಪ್ರಯಾಣ ರದ್ದಾಗಿದೆ.
ಉಕ್ರೇನ್ ಸರ್ಕಾರ ಎಲ್ಲಾ ಪ್ರಯಾಣಿಕರಿಗೆ ಬಂಕರ್‌ನಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದು, ಕುಟುಂಬದ ಸದಸ್ಯರ ಜೊತೆ ಚೈತ್ರಾ ನಿರಂತರ ಸಂಪರ್ಕದಲ್ಲಿದ್ದಾರೆ. ಇಂದು ಸಾಯಂಕಾಲವಷ್ಟೇ ಚೈತ್ರಾ ಕುಟುಂಬದವರಿಗೆ ಕರೆ ಮಾಡಿ ಮಾತನಾಡಿದ್ದಾರೆ ಎಂದು ಚೈತ್ರಾ ತಂದೆ ಸಾರಿಗೆ ನೌಕರ ಗಂಗಾಧರ ಪಬ್ಲಿಕ್ ನೆಕ್ಸ್ಟ್‌ಗೆ ಮಾಹಿತಿ ನೀಡಿದ್ದಾರೆ.
ಇದೀಗ ಜಿಲ್ಲಾಡಳಿತ ಆದೇಶದ ಮೇರೆಗೆ ಕುಂದಗೋಳ ತಹಶೀಲ್ದಾರ ಅಶೋಕ್ ಶಿಗ್ಗಾಂವಿ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಚೈತ್ರಾ ಕುಟುಂಬದವರನ್ನು ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿಸಲು ಮುಂದಾಗಿದ್ದಾರೆ. ತಮ್ಮ ಏಕಮಾತ್ರ ಪುತ್ರಿ ಚೈತ್ರಾ ಉಕ್ರೇನ್‌ನಲ್ಲಿ ಸಿಲುಕಿದ ಹಿನ್ನೆಲೆ ನಮಗೆ ದಿಕ್ಕೇ ತೋಚದಾಗಿದೆ ಎಂದು ಪೋಷಕರು ಆತಂಕದಲ್ಲೇ ಕಾಲ ಕಳೆಯುತ್ತಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
24/02/2022 07:04 pm