ಹುಬ್ಬಳ್ಳಿ: ರೈತನ ಬದುಕು ನಿಜಕ್ಕೂ ನೆಲೆಯಿಲ್ಲದ ಹೋರಾಟದಂತಾಗಿದೆ.ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತಾಗಿದೆ ಶೇಂಗಾ ಹಾಗೂ ಇನ್ನಿತರ ಬೆಳೆ ಬೆಳೆದ ರೈತರ ಸ್ಥಿತಿ. ನಿರಂತರವಾಗಿ ಸುರಿದ ಮಳೆಯಿಂದ ಶೇಂಗಾ ಕಪ್ಪಾಗಿದ್ದು, ಮೊಳಕೆಯೊಡೆದು ಹಾಳಾಗುತ್ತಿದ್ದು,ಈಗ ಸರಿಯಾದ ಬೆಲೆ ಸಿಗದೇ ಸಂಕಷ್ಟದಲ್ಲಿದ್ದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಕಳೆದ ವರ್ಷ ಸುರಿದ ಮಳೆಯಿಂದ ಬೆಳೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಧಾರವಾಡ ಜಿಲ್ಲೆಯ ರೈತರು, ಈ ವರ್ಷವು ವರುಣನ ಆರ್ಭಟಕ್ಕೆ ತತ್ತರಿಸಿ ಹೋಗಿದ್ದಾರೆ. ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಜಿಲ್ಲೆಯಲ್ಲಿ ಶೇಂಗಾ ಬೆಳೆ ಹಾಳಾಗುತ್ತಿದೆ. ಕಟಾವಿಗೆ ಬಂದಿದ್ದ ಶೇಂಗಾ ಮೊಳಕೆಯೊಡೆಯುತ್ತಿದೆ. ಮಳೆಯಿಂದಾಗಿ ನೀರಿಗೆ ಸಿಲುಕಿದ ಶೇಂಗಾ ಕೊಳೆಯುತ್ತಿದ್ದು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಶೇಂಗಾ ಬೆಳೆಗೆ ಮಾರುಕಟ್ಟೆಯಲ್ಲಿ ಸದ್ಯಕ್ಕೆ ಉತ್ತಮ ಬೆಲೆಯಿದೆ ಎಂದು ಭಾವಿಸಿದ್ದ ರೈತನಿಗೆ ಸರಿಯಾದ ಬೆಂಬಲ ಬೆಲೆ ಇಲ್ಲದಿರುವುದು ರೈತನ ಕಣ್ಣೀರಿಗೆ ಸಾಕ್ಷಿಯಾಗಿದೆ.ಶೇಂಗಾ ಬೆಳೆಹಾನಿಗೆ ಜಿಲ್ಲೆಯಲ್ಲಿ ಶೀಘ್ರ ಪರಿಹಾರ ನೀಡಬೇಕಿದೆ.
Kshetra Samachara
22/09/2020 04:17 pm