ಪಬ್ಲಿಕ್ ನೆಕ್ಸ್ಟ್ ವರದಿ- ಈರಣ್ಣ ವಾಲಿಕಾರ
ಹುಬ್ಬಳ್ಳಿ: ಬಡ ರೋಗಿಗಳ ಪಾಲಿನ ಸಂಜೀವಿನಿ ಎಂದೇ ಖ್ಯಾತಿ ಪಡೆದ ಕಿಮ್ಸ್ ಆಸ್ಪತ್ರೆ, ಇದೀಗ ಮತ್ತೊಂದು ಪ್ರಶಂಸೆಗೆ ಪಾತ್ರವಾಗಿದೆ. ಇರುವ ಸೌಲಭ್ಯಗಳನ್ನೇ ಸದುಪಯೋಗ ಪಡೆದುಕೊಂಡು ಇಲ್ಲಿನ ವೈದ್ಯರ ತಂಡ ವ್ಯಕ್ತಿಯೊಬ್ಬನ ಮುಖದಲ್ಲಿ ಸಿಕ್ಕಿಹಾಕಿಕೊಂಡಿದ್ದ ಚಾಕುವನ್ನು ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದು ಪುನರ್ಜನ್ಮ ನೀಡಿದ್ದಾರೆ.
ಹೀಗೆ ನಡೆದುಕೊಂಡು ಬರುತ್ತಿರುವ ವ್ಯಕ್ತಿಯ ಹೆಸರು ಭೀಮರಾವ್ ಚೌವ್ಹಾಣ್. ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಕೆ.ಕೆ ಹಳ್ಳಿಯ ನಿವಾಸಿ. ಕಳೆದ ಏಪ್ರಿಲ್ 18 ರಂದು ನಡೆದ ಜಗಳದಲ್ಲಿ ದುಷ್ಕರ್ಮಿಯೊಬ್ಬ ಇವರ ಮುಖಕ್ಕೆ ಹರಿತವಾದ ಚಾಕುವಿನಿಂದ ಇರಿದಿದ್ದ. ಪರಿಣಾಮ ಚಾಕು ಮುಖದ ದವಡೆಯಲ್ಲಿಯೇ ಮುರಿದು ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದರು. ಆಗ ಭೀಮರಾವ್ ಕುಟುಂಬಸ್ಥರು ಮೊದಲಿಗೆ ಹಳಿಯಾಳ ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲಿಸಿದರು. ಆದರೆ ಅಲ್ಲಿನ ವೈದ್ಯರು ಚಾಕುವನ್ನು ಸಂಪೂರ್ಣವಾಗಿ ಹೊರತೆಗೆಯಲು ಸಾಧ್ಯವಾಗಲಿಲ್ಲ. ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಅವರಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ಮೂಲಕ ಮರು ಜೀವ ನೀಡಲಾಗಿದೆ. ಇನ್ನು ಮಾಧ್ಯಮಗಳೊಂದಿಗೆ ಮಾತನಾಡಿದ ಭೀಮರಾವ್, ನನಗೆ ಕಿಮ್ಸ್ ವೈದ್ಯರು ಮರು ಜೀವ ನೀಡಿದ್ದಾರೆ ಎಂದು ಭಾವುಕರಾಗಿದ್ದಾರೆ.
ಇನ್ನು ಭೀಮರಾವ್ ಚೌವ್ಹಾಣ್ ಕಿಮ್ಸ್ ಆಸ್ಪತ್ರೆಗೆ ದಾಖಲಾಗುವಷ್ಟರಲ್ಲಿಯೇ ಚಾಕು ಮುಖದ ಡವಡೆಯಲ್ಲಿಯೇ 20 ದಿನಗಳ ಕಾಲ ಉಳಿದಿತ್ತು. ಇದರಿಂದ ಮುಖದ ದವಡೆ ಭಾಗದಲ್ಲಿ ತೀವ್ರವಾಗಿ ಗಾಯಗೊಂಡು, ಗಂಭೀರ ಪರಿಣಾಮ ಉಂಟಾಗುವ ಸಾಧ್ಯತೆಯಿತ್ತು. ಇದನ್ನು ಸವಾಲಾಗಿ ಸ್ವೀಕರಿಸಿದ ಕಿಮ್ಸ್ ಆಸ್ಪತ್ರೆಯ ಬಾಯಿ ಮತ್ತು ಮುಖ ಶಸ್ತ್ರಚಿಕಿತ್ಸೆ ವಿಭಾಗದ ಮುಖ್ಯಸ್ಥ ಡಾ.ಮಂಜುನಾಥ ವಿಜಯಪುರ ನೇತೃತ್ವದ ಇಎನ್‌ಟಿ ಮತ್ತು ನರಶಸ್ತ್ರಚಿಕಿತ್ಸೆ ವಿಭಾಗದ ವೈದ್ಯರು ಕ್ಲಿಷ್ಟಕರವಾದ ಶಸ್ತ್ರಚಿಕಿತ್ಸೆಯನ್ನು ನಡೆಸಿ ರೋಗಿಯ ಮುಖದಿಂದ 6 ಸೆಂ.ಮೀ ಒಡೆದ ಚಾಕುವನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ. ಈಗ ರೋಗಿ ಆರೋಗ್ಯವಾಗಿದ್ದು, ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಒಟ್ಟಿನಲ್ಲಿ ವ್ಯಕ್ತಿಯ ಮುಖದ ದವಡೆಯಲ್ಲಿ ಸಿಕ್ಕಿಹಾಕಿಕೊಂಡ ಚಾಕುವನ್ನು ತೆಗೆಯುವಲ್ಲು ವೈದ್ಯರು ಸಕ್ಸೆಸ್ ಆಗಿದ್ದಾರೆ. ಇನ್ನು ವೈದ್ಯರ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.
ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ
Kshetra Samachara
19/06/2022 12:43 pm