ಧಾರವಾಡ: ಜಾನುವಾರುಗಳಿಗೆ ಚರ್ಮಗಂಟು ರೋಗ ಹರಡುತ್ತಿರುವುದರಿಂದ ಧಾರವಾಡ ಜಿಲ್ಲೆಯಾದ್ಯಂತ ಜಾನುವಾರು ಮಾರುಕಟ್ಟೆಗಳನ್ನು ಬಂದ್ ಮಾಡಿ ಅಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದ್ದರೂ ಇದರ ಅರಿವಿಲ್ಲದೇ ಧಾರವಾಡದ ಎಪಿಎಂಸಿಯಲ್ಲಿನ ಜಾನುವಾರು ಮಾರುಕಟ್ಟೆ ಮಂಗಳವಾರ ಎಂದಿನಂತೆ ನಡೆಯಿತು.
ಈಗಾಗಲೇ ಅಲ್ಲಲ್ಲಿ ಜಾನುವಾರುಗಳಿಗೆ ಚರ್ಮಗಂಟು ರೋಗ ಕಾಣಿಸಿಕೊಂಡಿದ್ದು, ಇದರ ಹಬ್ಬುವಿಕೆ ತಡೆಗಟ್ಟುವ ಉದ್ದೇಶದಿಂದ ಜಿಲ್ಲಾಡಳಿತ ಈ ರೀತಿಯ ಕ್ರಮ ಕೈಗೊಂಡಿದೆ. ಆದರೆ, ಜಾನುವಾರು ವ್ಯಾಪಾರಸ್ಥರು ಇದರ ಅರಿವಿಲ್ಲದೇ ಮಂಗಳವಾರ ಎಪಿಎಂಸಿ ಮಾರುಕಟ್ಟೆಗೆ ಜಾನುವಾರಗಳನ್ನು ತೆಗೆದುಕೊಂಡು ಬಂದಿದ್ದರು.
ಈ ಜಾನುವಾರುಗಳಿಗೆ ಹಬ್ಬುತ್ತಿರುವ ಚರ್ಮಗಂಟು ರೋಗದ ಬಗ್ಗೆ ಹಾಗೂ ಜಾನುವಾರು ಸಂತೆ ಬಂದ್ ಮಾಡಿರುವ ಬಗ್ಗೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಏನು ಹೇಳಿದ್ದಾರೆ ಕೇಳಿ..
ಇನ್ನು ಈ ಜಾನುವಾರು ಸಂತೆ ಬಂದ್ ಮಾಡುವಂತೆ ಶನಿವಾರವಷ್ಟೇ ನೋಟಿಸ್ ಬಂದಿದ್ದು, ಎಲ್ಲ ಹಳ್ಳಿಗಳಿಗೆ ಸುದ್ದಿ ಮುಟ್ಟಿಸುವುದು ಸಾಧ್ಯವಾಗಿಲ್ಲ ಈ ವಿಷಯ ಗೊತ್ತಿರದ ಜನ ಜಾನುವಾರುಗಳನ್ನು ತೆಗೆದುಕೊಂಡು ಬಂದಿದ್ದಾರೆ ಎಂದು ಎಪಿಎಂಸಿ ಅಧ್ಯಕ್ಷ ಬಸಪ್ಪ ಹೊಸೂರ ತಿಳಿಸಿದರು.
ಸದ್ಯ ಜಾನುವಾರುಗಳಿಗೆ ಚರ್ಮಗಂಟು ರೋಗ ಗಂಟು ಬಿದ್ದಿದ್ದು, ಅದರ ತಡೆಗಟ್ಟುವಿಕೆಗಾಗಿ ಜಿಲ್ಲಾಡಳಿತ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದೆ. ವ್ಯಾಪಾರಸ್ಥರು ಹಾಗೂ ರೈತರು ಕೂಡ ಜಿಲ್ಲಾಡಳಿತದ ಕ್ರಮಕ್ಕೆ ಸ್ಪಂದನೆ ನೀಡಬೇಕಿದೆ.
Kshetra Samachara
07/10/2020 10:50 am