ಧಾರವಾಡ: ಕೋವಿಡ್ -19 ರ ಹಿನ್ನೆಲೆಯಲ್ಲಿ ತರಗತಿಗಳನ್ನು ಎಸ್ಓಪಿ ಅನುಸಾರ ನಡೆಸಬೇಕು. ಮಕ್ಕಳು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಕ್ರಮವಹಿಸಬೇಕು. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚು ಇದ್ದರೆ ಪರ್ಯಾಯ ದಿನಗಳಂದು ಹಾಜರಾಗಲು ಸೂಚಿಸಬೇಕು. ಶಾಲೆಗಳ ಸುತ್ತಮುತ್ತ ತಂಬಾಕು ಮಾರಾಟ ಮಾಡುವ ಅಂಗಡಿಗಳಿದ್ದರೆ ಮುಖ್ಯ ಗುರುಗಳು ಪೊಲೀಸ್ ಇಲಾಖೆಯ ಪತ್ರವನ್ನು ನೀಡಿ ತಂಬಾಕು ಮಾರಾಟ ನಿಲ್ಲಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಎಸ್.ಕೆಳದಿಮಠ ಹೇಳಿದರು.
ಜಿಲ್ಲೆಯ ಶೈಕ್ಷಣಿಕ ಮೇಲ್ವಿಚಾರಕರ ಆನ್‌ಲೈನ್ ಸಭೆ ನಡೆಸಿ ಅವರು ಮಾತನಾಡಿದರು. ಶಾಲೆ, ಕಚೇರಿಯ ಯಾವುದೇ ಸಿಬ್ಬಂದಿ ತಂಬಾಕು ಸಂಬಂಧಿತ ಚಟುವಟಿಕೆಯಲ್ಲಿದ್ದರೆ ಮುಖ್ಯಸ್ಥರು ದಂಡ ವಿಧಿಸಬೇಕು. ಶಾಲೆಯ ಸಮೀಪವಿರುವ ಅಂಗಡಿಯ ಸುತ್ತಮುತ್ತ ಸಿಗರೇಟ್ ತುಂಡುಗಳು ಕಂಡು ಬಂದರೆ ಪ್ರತಿ ತುಂಡಿಗೆ 20O ರೂಪಾಯಿಗಳಂತೆ ದಂಡ ವಿಧಿಸಬೇಕು. ಸಿಗರೇಟ್ ಮಾರಾಟಕ್ಕೆ ಅವಕಾಶ ನೀಡಬಾರದು ಎಂದರು.
2021-22 ನೇ ಸಾಲನಲ್ಲಿ ನಮ್ಮ ಜಿಲ್ಲೆಯಲ್ಲಿ 1463 ಮಕ್ಕಳು ಶಾಲೆಯಿಂದ ಹೊರಗೆ ಉಳಿದಿದ್ದಾರೆ. ಈ ಮಕ್ಕಳನ್ನು ಶಾಲಾ ಮುಖ್ಯವಾಹಿನಿಗೆ ತರುವುದು ಪ್ರಮುಖವಾದ ಕಾರ್ಯವಾಗಿರುತ್ತದೆ. 2021-22 ನೇ ಸಾಲಿನಲ್ಲಿ ಬಿಡುಗಡೆಯಾದ ಶಾಲಾ ಅನುದಾನವನ್ನು ಬಳಕೆ ಮಾಡಿ ಉಪಯುಕ್ತತಾ ಪ್ರಮಾಣ ಪತ್ರವನ್ನು ಸಲ್ಲಿಸಬೇಕು. ಎಸ್.ಎ.ಟಿ.ಎಸ್ ನಲ್ಲಿ ಮಕ್ಕಳ ದಾಖಲಾತಿಯನ್ನು ಮಾಡಬೇಕು.
ಎಸ್.ಎಸ್.ಎಲ್.ಸಿ ಮಕ್ಕಳ ಪರೀಕ್ಷಾ ನೋಂದಣಿ ಕಾರ್ಯಕ್ಕೆ ಜನವರಿ 10 ಕೊನೆಯ ದಿನವಾಗಿದೆ. ಇದುವರೆಗೂ ಜಿಲ್ಲೆಯ 428 ಶಾಲೆಗಳಲ್ಲಿ 424 ಶಾಲೆಗಳ ನೋಂದಣಿ ಕಾರ್ಯ ನಡೆದಿದೆ. ಆದರೆ ಐ.ಎನ್.ಎ ರಾಮರಾವ್ ಸೈನಿಕ ಸ್ಕೂಲ್, ಎ.ಪಿ ಪ್ರೌಢ ಶಾಲೆ, ಶ್ರೀಮತಿ ಸಂಪತ್‌ಕುಮಾರಿ ಹಂಚನಾಳ ಹೈಸ್ಕೂಲ್ ಹಾಗೂ ಸ್ವಾಮಿ ವಿವೇಕಾನಂದ ಹೈಸ್ಕೂಲ್ ಇನ್ನೂ ನೋಂದಣಿ ಪ್ರಾರಂಭ ಮಾಡಿಲ್ಲ. ಖಾಸಗಿ ಶಾಲೆಗಳು ಕೂಡಲೇ ಮಾನ್ಯತೆ ನವೀಕರಣ ಮಾಡಿಕೊಳ್ಳಬೇಕು, ಇಲ್ಲದಿದ್ದರೆ ಪರೀಕ್ಷೆಗೆ ಮಕ್ಕಳನ್ನು ನೋಂದಾಯಿಸಲು ಅವಕಾಶವಿರುವುದಿಲ್ಲ. ಇದನ್ನು ನಿರ್ಲಕ್ಷಿಸಿದರೆ ಸಂಬಂಧಿಸಿದ ಮುಖ್ಯೋಪಾಧ್ಯಾಯರು ಹಾಗೂ ಆಡಳಿತ ಮಂಡಳಿಯವರು ಜವಾಬ್ದಾರರಾಗಿರುತ್ತಾರೆ. ಪ್ರತಿ ಶಾಲೆಯಲ್ಲಿ ಬೆಳಗಿನ ಅವಧಿಯಲ್ಲಿ ವಿಶೇಷ ತರಗತಿಗಳನ್ನು ಹಾಕಿಕೊಂಡು ಜನೇವರಿ ತಿಂಗಳ ಅಂತ್ಯದ ವೇಳೆಗೆ ಪಠ್ಯಕ್ರಮವನ್ನು ಪೂರ್ಣಗೊಳಿಸಬೇಕು.
ಅವಧಿಯನಂತರ ಗುಂಪು ಅಧ್ಯಯನ ಮೂಲಕ ಕಲಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ಮಾರ್ಗದರ್ಶನ ಮಾಡಲು ಸೂಚಿಸಿದರು.
Kshetra Samachara
04/01/2022 04:00 pm