ಧಾರವಾಡ: ಅಕ್ಟೋಬರ್ 09 ಧಾರವಾಡ ಜಿಲ್ಲೆಯ ಹುಬ್ಬಳ್ಳಿ ಗ್ರಾಮೀಣ, ಧಾರವಾಡ ಗ್ರಾಮೀಣ, ಅಳ್ಳಾವರ, ನವಲಗುಂದ, ಅಣ್ಣಿಗೇರಿ, ಕುಂದಗೋಳ, ಕಲಘಟಗಿ ತಾಲೂಕುಗಳಲ್ಲಿ ಈದ್ ಮಿಲಾದ್ ಹಬ್ಬವನ್ನು ಆಚರಿಸಲಾಗುತ್ತಿದ್ದು, ಈ ಸಮಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಠಿಯಿಂದ ಅಕ್ಟೋಬರ್ 08 ರ ರಾತ್ರಿ 11.59 ರಿಂದ ಅಕ್ಟೊಬರ್ 10 ರ ಬೆಳಿಗ್ಗೆ 06 ಗಂಟೆಯವರೆಗೆ ಈ ತಾಲೂಕುಗಳ ವ್ಯಾಪ್ತಿಯಲ್ಲಿ ಮದ್ಯಪಾನ, ಮದ್ಯ ಮಾರಾಟ ಹಾಗೂ ಮದ್ಯ ಸಾಗಾಣಿಕೆಯನ್ನು ನಿಷೇಧಿಸಿ, ಜಿಲ್ಲಾ ದಂಡಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಇಂದು ಆದೇಶ ಹೊರಡಿಸಿದ್ದಾರೆ.
ಈ ಕುರಿತು ಆದೇಶ ನೀಡಿರುವ ಅವರು, ಈದ್-ಮಿಲಾದ್ ಹಬ್ಬದ ಆಚರಣೆ ಸಮಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಂಡು ಬರುವ ಹಿತದೃಷ್ಠಿಯಿಂದ ಧಾರವಾಡ ಜಿಲ್ಲೆಯ ಗ್ರಾಮೀಣ ವ್ಯಾಪ್ತಿಯಲ್ಲಿನ ಯಾವತ್ತೂ ಭಾರತೀಯ ತಯಾರಿಕ ಮದ್ಯದ ಅಂಗಡಿಗಳು, ಬೀಯರ್ ಬಾರಗಳು, ಕ್ಲಬ್‌ಗಳು ಮತ್ತು ಮದ್ಯದ ಡಿಪೊಗಳನ್ನು ಈ ನಿಷೇಧಾಜ್ಞೆ ಜಾರಿಯಲ್ಲಿರುವ ಅವಧಿಯಲ್ಲಿ ಮುಚ್ಚತಕ್ಕದ್ದು.
ಇದಲ್ಲದೇ ಪರಿಸ್ಥಿತಿಗೆ ಅನುಗುಣವಾಗಿ ಸಾರ್ವಜನಿಕ ಶಾಂತತೆಯನ್ನು ಕಾಯ್ದುಕೊಂಡು ಬರುವ ಹಿತದೃಷ್ಠಿಯಿಂದ ವಲಯ ಅಬಕಾರಿ ಇನ್ಸ್‌ಪೆಕ್ಟರರು ಹಾಗೂ ಉಪವಿಭಾಗ ಅಬಕಾರಿ ಅಧೀಕ್ಷಕರು, ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 21(2)ರನ್ವಯ, ಅವಶ್ಯಕತೆ ಕಂಡು ಬಂದಲ್ಲಿ ಶಾಂತಿ ಪಾಲನೆಗಾಗಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.
ಧಾರವಾಡ ಜಿಲ್ಲೆಯ ಆರಕ್ಷಕ ಅಧೀಕ್ಷಕರು, ಉಪ ಆರಕ್ಷಕ ಅಧೀಕ್ಷಕರು, ಅಬಕಾರಿ ಉಪ ಆಯುಕ್ತರು ಹಾಗೂ ಹೆಚ್ಚುವರಿ ಅಬಕಾರಿ ಅಧೀಕ್ಷಕರ ಧಾರವಾಡ, ನವನಗರ, ಹುಬ್ಬಳ್ಳಿ ಇವರು ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ಈ ಆದೇಶವನ್ನು ಪರಿಣಾಮಕಾರಿಯಾಗಿ ಜಾರಿಗೆ ಬರುವಂತೆ ಕ್ರಮ ಜರುಗಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
Kshetra Samachara
07/10/2022 09:10 am