ಧಾರವಾಡ: ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮ ಪಂಚಾಯತಿಯ ಪಂಚಾಯತ ಅಭಿವೃದ್ಧಿ ಅಧಿಕಾರಿಯು ಕರ್ತವ್ಯಲೋಪ ಮಾಡಿ, ಕರ್ನಾಟಕ ನಾಗರಿಕ ಸೇವಾ ನಿಯಮಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಇಲಾಖೆ ವಿಚಾರಣೆ ಕಾಯ್ದಿರಿಸಿ, ಜನೆವರಿ 10, 2022 ರಂದು ಪಿಡಿಓ ನವಾಬ್‍ಸಾಬ್ ಅಲಿಸಾಬ್ ನದಾಫ್ ಅವರನ್ನು ಅಮಾನತುಗೊಳ್ಳಿಸಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಸುಶೀಲಾ ಆದೇಶ ಹೊರಡಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮ ಪಂಚಾಯತಿಯ ಪಂಚಾಯತ ಅಭಿವೃದ್ಧಿ ಅಧಿಕಾರಿಯು ಕರ್ತವ್ಯಲೋಪ ಮಾಡಿರುವ ಕುರಿತು ತನಿಖೆ ಕೈಗೊಂಡು ವರದಿ ಸಲ್ಲಿಸಲು ಕುಂದಗೋಳ ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ನಿರ್ದೇಶಿಸಲಾಗಿತ್ತು. ಅದರಂತೆ ಅವರು ಅಧಿಕಾರಿಗಳ ತಂಡ ರಚಿಸಿ, ಯರಗುಪ್ಪಿ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ವರದಿ ನೀಡಲು ಕ್ರಮ ಕೈಗೊಂಡಿದ್ದರು. ತನಿಖಾ ತಂಡದ ವರದಿ ಆದರಿಸಿ ಯರಗುಪ್ಪಿ ಗ್ರಾಮ ಪಂಚಾಯತಿ ಪಿಡಿಓ ಸರಿಯಾಗಿ ಕರ್ತವ್ಯ ನಿರ್ವಹಿಸದ, ಅನಧಿಕೃತ ಗೈರು ಹಾಜರು ಯೋಜನಾ ಅನುಷ್ಠಾನದಲ್ಲಿ ವಿಳಂಬ ಹಾಗೂ ಉನ್ನತ ಅಧಿಕಾರಿಗಳ ನಿರ್ದೇಶನಗಳನ್ನು ಪಾಲಿಸದಿರುವ ಕುರಿತು ವರದಿ ಸಲ್ಲಿಸಿ, ಸದರಿ ಪಿಡಿಓ ವಿರುದ್ಧ ಸೂಕ್ತ ಕ್ರಮ ಜರುಗಿಸಲು ಶಿಪಾರಸ್ಸು ಮಾಡಿದ್ದರು.
ಅದರಂತೆ ತನಿಖೆ ಕೈಗೊಂಡು ಜನೆವರಿ 10, 2022 ರಂದು ಇಲಾಖಾ ವಿಚರಣೆ ಕಾಯ್ದಿರಿಸಿ, ಯರಗುಪ್ಪಿ ಗ್ರಾಮ ಪಂಚಾಯತಿಯ ಪಿಡಿಓ ನವಾಬ್‍ಸಾಬ್ ಅಲಿಸಾಬ್ ನದಾಫ್ ಅವರನ್ನು ಅಮಾನತ್ತುಗೊಳಿಸಿ ಆದೇಶಿಸಲಾಗಿದೆ. ಮತ್ತು ಅಮಾನತ್ತುಗೊಂಡ ಸದರಿ ನೌಕರನು ಮೇಲಾಧಿಕಾರಿಗಳ ಪೂರ್ವಾನುಮತಿ ಪಡೆಯದೆ ಕೇಂದ್ರ ಸ್ಥಾನ ಬಿಡತಕ್ಕದ್ದಲ್ಲ ಎಂದು ನಿರ್ದೇಶಿಸಲಾಗಿದೆ. ಬೂತರ್ಲಘಟ್ಟ ಗ್ರಾಮ ಪಂಚಾಯತಿಯ ಪಿಡಿಓ ಪುಷ್ಪಾವತಿ ಮೇದಾರ ಅವರನ್ನು ಯರಗುಪ್ಪಿ ಗ್ರಾಮ ಪಂಚಾಯತಿ ಪಿಡಿಓ ಹುದ್ದೆಯ ಹೆಚ್ಚುವರಿ ಚಾರ್ಜ ನೀಡಿ ನೇಮಿಸಲಾಗಿದೆ.
ಗ್ರಾಮ ಪಂಚಾಯತ ಪಿಡಿಓ ವಿರುದ್ಧ ಕೇಳಿ ಬಂದಿರುವ ದೂರುಗಳ ಕುರಿತು ಪಾರದರ್ಶಕವಾಗಿ ಸಮಗ್ರ ತನಿಖೆ ಕೈಗೊಂಡು, ಆದಷ್ಟು ಬೇಗನೆ ವರದಿ ನೀಡುವಂತೆ ನಿರ್ದೇಶಿಸಲಾಗಿದೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಸುಶೀಲಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Kshetra Samachara
14/01/2022 08:24 pm