ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಡಾ.ಮಲ್ಲಿಕಾರ್ಜುನ ಮನಸೂರು ಟ್ರಸ್ಟ್‌ಗೆ ಮನಸೂರು ಗ್ರಾಮಸ್ಥರ ನೇಮಕ

ಧಾರವಾಡ: ಡಾ.ಮಲ್ಲಿಕಾರ್ಜುನ ಮನಸೂರ ಅವರ 111ನೇ ಜನ್ಮದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಡಿಸೆಂಬರ್ 31 ರಂದು ಅವರ ಹುಟ್ಟೂರಾದ ಮನಸೂರ ಗ್ರಾಮದಲ್ಲಿ ಪೂಜಾ ಕಾರ್ಯಕ್ರಮ ಹಾಗೂ ಗ್ರಾಮಸ್ಥರ ಬೇಡಿಕೆಯಂತೆ ಡಾ.ಮಲ್ಲಿಕಾರ್ಜುನ ಮನಸೂರು ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ಗೆ ಇಬ್ಬರು ಸದಸ್ಯರನ್ನು ನೇಮಿಸುವ ಕುರಿತು ಟ್ರಸ್ಟ್ ಸಭೆಯಲ್ಲಿ ನಿರ್ಣಯಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.

ಇಂದು ಸಂಜೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಡಾ. ಮಲ್ಲಿಕಾರ್ಜುನ ಮನಸೂರು ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ನ ಸಾಮಾನ್ಯ ಸಭೆ ಜರುಗಿಸಿ ಅವರು ಮಾತನಾಡಿದರು.

ಡಾ.ಮಲ್ಲಿಕಾರ್ಜುನ ಮನಸೂರು ಅವರ ಸಂಗೀತ ಪರಂಪರೆಯನ್ನು ಉಳಿಸಿ, ಬೆಳೆಸಲು ಮತ್ತು ಯುವ ಸಮುದಾಯದಲ್ಲಿ ಸಂಗೀತದ ಕುರಿತು ಆಸಕ್ತಿ ಬೆಳೆಸುವ ವಿವಿಧ ಕಾರ್ಯಕ್ರಮಗಳನ್ನು ಟ್ರಸ್ಟ್‌ನಿಂದ ಆಯೋಜಿಸಲಾಗುತ್ತಿದೆ. ಇತ್ತೀಚೆಗೆ ಮನಸೂರು ಗ್ರಾಮ ಭೇಟಿ ಸಂದರ್ಭದಲ್ಲಿ ಡಾ.ಮಲ್ಲಿಕಾರ್ಜುನ ಮನಸೂರು ಅವರು ಹುಟ್ಟಿದ ಮನೆಗೆ ಭೇಟಿ ನೀಡಲಾಯಿತು. ಈ ಸಂದರ್ಭದಲ್ಲಿ ಗ್ರಾಮದ ಮುಖಂಡರು, ಗ್ರಾಮ ಪಂಚಾಯತ್ ಸದಸ್ಯರು ಡಾ. ಮಲ್ಲಿಕಾರ್ಜುನ ಮನಸೂರು ಅವರ ಸ್ಮರಣೆಗಾಗಿ ಈ ಗ್ರಾಮದಲ್ಲಿಯೂ ಕಾರ್ಯಕ್ರಮಗಳನ್ನು ಆಯೋಜಿಸುವ ಕುರಿತು ಮತ್ತು ಮನಸೂರು ಗ್ರಾಮದಲ್ಲಿ ವಾಸವಿರುವ ಡಾ. ಮಲ್ಲಿಕಾರ್ಜುನ ಮನಸೂರು ಕುಟುಂಬದ ಸದಸ್ಯರೊಬ್ಬರನ್ನು ಹಾಗೂ ಗ್ರಾಮದ ಪರವಾಗಿ ಒಬ್ಬರನ್ನು ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ಗೆ ಸದಸ್ಯರನ್ನಾಗಿ ನೇಮಿಸಬೇಕೆಂದು ಮನವಿ ಸಲ್ಲಿಸಿದ್ದರು.

ಈ ಕುರಿತು ಸಭೆಯಲ್ಲಿ ಪರಿಶೀಲಿಸಲಾಗಿ ಬರುವ ಡಿಸೆಂಬರ್ 31 ರಂದು ಡಾ. ಮಲ್ಲಿಕಾರ್ಜುನ ಮನಸೂರ ಅವರ 111ನೇ ಜನ್ಮ ದಿನಾಚರಣೆ ನಿಮಿತ್ತ ಅವರ ಸ್ವಗ್ರಾಮದ ಮನೆಯಲ್ಲಿ ಪೂಜಾ ಕಾರ್ಯಕ್ರಮ ನೆರವೇರಿಸಲು ತೀರ್ಮಾನಿಸಲಾಯಿತು ಮತ್ತು ಕುಟುಂಬ ಸದಸ್ಯರೊಬ್ಬರನ್ನು ಹಾಗೂ ಮನಸೂರು ಗ್ರಾಮ ಪಂಚಾಯತ್ ಅಧ್ಯಕ್ಷರನ್ನು ಡಾ. ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ಗೆ ಸದಸ್ಯರನ್ನಾಗಿ ನೇಮಿಸಲು ಸಭೆಯಲ್ಲಿ ನಿರ್ಧರಿಸಲಾಯಿತು ಮತ್ತು ಕುರಿತು ಗ್ರಾಮ ಪಂಚಾಯತಿಯಿಂದ ಶಿಫಾರಸ್ಸು ಪಡೆಯಲು ಟ್ರಸ್ಟ್ ಕಾರ್ಯದರ್ಶಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಮನಸೂರ ಗ್ರಾಮದಲ್ಲಿರುವ ಡಾ. ಮಲ್ಲಿಕಾರ್ಜುನ ಮನಸೂರ ಅವರ ಹುಟ್ಟಿದ ಮನೆಯನ್ನು ಸ್ಮಾರಕವಾಗಿ ರೂಪಿಸಲು ಗ್ರಾಮಸ್ಥರು ಬೇಡಿಕೆ ಸಲ್ಲಿಸಿದ್ದರು. ಈ ಕುರಿತು ಸಭೆಯಲ್ಲಿ ಚರ್ಚಿಸಿ, ಆ ಮನೆಯನ್ನು ಟ್ರಸ್ಟ್‌ಗೆ ಹಸ್ತಾಂತರಿಸಿ, ಪರಭಾರೆ ಮಾಡಿದಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಸ್ಮಾರಕ ರೂಪಿಸಲು ತೀರ್ಮಾನಿಸಲಾಯಿತು.

ಬರುವ ಡಿಸೆಂಬರ್ 31 ರಂದು ಡಾ.ಮಲ್ಲಿಕಾರ್ಜುನ ಮನಸೂರ ಅವರ ಜನ್ಮದಿನದ ನಿಮಿತ್ಯ ಟ್ರಸ್ಟ್ ಆವರಣದಲ್ಲಿರುವ ಅವರ ಸಮಾಧಿಗೆ ಪೂಜೆ ಸಲ್ಲಿಸಿ, ನಂತರ ಮನಸೂರ ಗ್ರಾಮದ ಅವರು ಹುಟ್ಟಿದ ಮನೆಯಲ್ಲಿ ಗ್ರಾಮ ಪಂಚಾಯತ್ ಹಾಗೂ ಗ್ರಾಮಸ್ಥರೊಂದಿಗೆ ಡಾ. ಮಲ್ಲಿಕಾರ್ಜುನ ಮನಸೂರ ಅವರ ಭಾವಚಿತ್ರದ ಪೂಜಾ ಕಾರ್ಯಕ್ರಮ ಕೈಗೊಳ್ಳಲು ಸಭೆಯಲ್ಲಿ ನಿರ್ಧರಿಸಲಾಯಿತು.

ಜನವರಿ 1, 2022 ರ ಸಂಜೆ ಡಾ.ಮಲ್ಲಿಕಾರ್ಜುನ ಮನಸೂರ ಅವರ 111ನೇ ಜನ್ಮದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಡಾ. ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಹಾಗೂ ಸಂಗೀತೋತ್ಸವ ಕಾರ್ಯಕ್ರಮವನ್ನು ಸೃಜನಾ ರಂಗಮಂದಿರದಲ್ಲಿ ಆಯೋಜಿಸಲು ನಿರ್ಣಯಿಸಲಾಯಿತು ಮತ್ತು ಆಯ್ಕೆ ಸಮಿತಿಯು ಪ್ರಸಕ್ತ ಸಾಲಿನ ಡಾ. ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಸಮ್ಮಾನ ಪ್ರಶಸ್ತಿಗೆ ಮುಂಬೈ ನಿವಾಸಿ ಪಂ.ನಿತ್ಯಾನಂದ ಹಳದಿಪೂರ ಹಾಗೂ ಡಾ. ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಯುವ ಪುರಸ್ಕಾರಕ್ಕೆ ಧಾರವಾಡದ ಯುವ ಪ್ರತಿಭೆ ಕುಮಾರಿ ಶಿವಾನಿ ಮಿರಜಕರ ಅವರನ್ನು ಆಯ್ಕೆ ಮಾಡಿರುವುದನ್ನು ಸಭೆಯಲ್ಲಿ ಅಧಿಕೃತಗೊಳಿಸಿದರು.

ಟ್ರಸ್ಟ್ ಸದಸ್ಯ ಕಾರ್ಯದರ್ಶಿ ಮಂಜುಳಾ ಯಲಿಗಾರ ಅವರು 2022-23ನೇ ಸಾಲಿನ ಕ್ರಿಯಾಯೋಜನೆ, ಮೂರು ತಿಂಗಳಿಗೊಮ್ಮೆ ಒಂದು ವಚನ ಗಾಯನ ಕಾರ್ಯಕ್ರಮ ಹಾಗೂ ಟ್ರಸ್ಟ್‌ನ ಇತರ ವಿಷಯಗಳ ಕುರಿತು ಸಭೆಯಲ್ಲಿ ಮಂಡಿಸಿದರು.

Edited By : Vijay Kumar
Kshetra Samachara

Kshetra Samachara

15/12/2021 09:51 pm

Cinque Terre

27.33 K

Cinque Terre

0

ಸಂಬಂಧಿತ ಸುದ್ದಿ