ಧಾರವಾಡ: ಧಾರವಾಡ ಜಿಲ್ಲೆಯಲ್ಲಿ ಸುಳ್ಳು ಜಾತಿ ಪ್ರಮಾಣ ಪಡೆದ ಬಗ್ಗೆ 10 ಪ್ರಕರಣಗಳಲ್ಲಿ ದೋಷಾರೋಪಣೆ ಕಂಡುಬಂದಿತ್ತು. ಇವುಗಳ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿ, ವಿತರಣೆ ಮಾಡಿ 8 ಜಾತಿ ಪ್ರಮಾಣ ಪತ್ರಗಳನ್ನು ರದ್ದುಗೊಳಿಸಲಾಗಿದೆ. ಸುಳ್ಳು ಮಾಹಿತಿ ನೀಡಿ ಪರಿಶಿಷ್ಟ ಜಾತಿ ಹಾಗೂ ಪಂಗಡದ ಜಾತಿ ಪ್ರಮಾಣ ಪತ್ರ ಪಡೆದವರ ವಿರುದ್ಧ ಕಾನೂನು ಕ್ರಮಕ್ಕೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ನೂತನ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ 3ನೇ ತ್ರೈಮಾಸಿಕ ಸಭೆಯಲ್ಲಿ ಅವರು ಮಾತನಾಡಿದರು.
2 ಪ್ರಕರಣಗಳಲ್ಲಿ ನಿಜವಾಗಿ ಜಾತಿ ಪ್ರಮಾಣ ಪತ್ರವನ್ನು ಪಡೆದುಕೊಂಡಿದ್ದು, ಇವುಗಳನ್ನು ಮಾನ್ಯ ಮಾಡಲಾಗಿದೆ ಎಂದರು.
ಸಭೆಯಲ್ಲಿ ವಿಶೇಷ ಕಾನೂನು ಸಲಹೆಗಾರರ ಹುದ್ದೆ ನೇಮಕಾತಿ, ಕುಂಬಾರಕೊಪ್ಪ ಗ್ರಾಮದ ಟೆನೆಂಟ್ ಕೋ ಆಪರೇಟಿವ್ ಸೊಸೈಟಿ, ಅಳ್ನಾವರ ತಾಲೂಕಿನ ದೊಪೆನಟ್ಟಿ ಗ್ರಾಮದ ಯಲ್ಲಪ್ಪ ಕರೆಯಪ್ಪ ಹರಿಜನ ಅವರಿಗೆ ಮಂಜೂರಾದ ಜಮೀನು, ಪರಿಶಿಷ್ಟ ವರ್ಗದ ಜನಸಂಖ್ಯೆ ಹೆಚ್ಚಿರುವ ಕಾಲೊನಿಗಳ ಅಭಿವೃದ್ಧಿ ಕುರಿತು ಚರ್ಚಿಸಲಾಯಿತು.
ಕುಂದಗೋಳ ತಾಲೂಕಿನ ಗುರುವಿನಹಳ್ಳಿ ಗ್ರಾಮದ ರತ್ನವ್ವಾ ನಾಗಪ್ಪ ಪಡೆಸೂರು ಪ್ರವರ್ಗ 01 ಭೋಯಿ ಬದಲಾಗಿ ಪರಿಶಿಷ್ಟ ಜಾತಿಯ ಭೋವಿ ಪ್ರಮಾಣ ಪತ್ರ ಪಡೆದ ಕುರಿತು ಕುಂದಗೋಳ ತಹಶೀಲ್ದಾರರ 15 ದಿನದಲ್ಲಿ ಸಮಿತಿಗೆ ಪರಿಶೀಲನಾ ವರದಿ ನೀಡುವಂತೆ ಸೂಚಿಸಲಾಯಿತು. ಕಲಘಟಗಿ ತಾಲೂಕಿನ ಜಮ್ಮಿಹಾಳ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಜನಾಂಗದ ಕಲ್ಯಾಣ ಸಂಘದ ವತಿಯಿಂದ ನಡೆಯುವ ಫ್ರೌಡಶಾಲೆಗಳಿಗೆ ಜಮೀನು ಮಂಜೂರು ಮಾಡುವ ಕುರಿತು ಚರ್ಚಿಸಲಾಯಿತು.
ಸರ್ಕಾರಿ ಅಭಿಯೋಜಕರು ಜಿಲ್ಲೆಯಲ್ಲಿ ಒಟ್ಟು ಪರಿಶಿಷ್ಟ ಜಾತಿ ಹಾಗೂ ದೌರ್ಜನ್ಯ ತಡೆ ಕಾಯ್ದೆ ಅಡಿ 143 ಪ್ರಕರಣಗಳು ದಾಖಲಾಗಿದ್ದು 2 ಪ್ರಕರಣಗಳು ವಿಲೇವಾರಿಯಾಗಿವೆ. 141 ಪ್ರಕರಣಗಳು ಬಾಕಿಯಿವೆ ಎಂದು ಸಭೆಗೆ ತಿಳಿಸಿದರು.
Kshetra Samachara
10/11/2021 10:23 pm