ಒಂದು ಕಡೆಗೆ ಸಾಲಾಗಿ ನಿಂತಿರುವ ಆಟೋಗಳು, ಮತ್ತೊಂದೆಡೆ ಗುಂಪು ಗುಂಪಾಗಿ ನಿಂತು ಜಿಲ್ಲಾಡಳಿತದ ವಿರುದ್ಧ ಹರಿಹಾಯುತ್ತಿರುವ ಆಟೋ ಚಾಲಕರು, ಇದಕ್ಕೆಲ್ಲ ಕಾರಣವಾಗಿದ್ದು ಆಟೋ ರಿಕ್ಷಾ ಪ್ರಯಾಣಿಕರ ದರವನ್ನು ಪರಿಷ್ಕರಣೆ ಮಾಡಿರೋದು.
ಹೌದು, ಧಾರವಾಡ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು, ಆಟೋ ಪ್ರಯಾಣಿಕರ ದರವನ್ನು ಪರಿಷ್ಕರಿಸಿ 1.6 ಕಿ.ಮೀ ಗೆ ಪ್ರಸ್ತುತವಿರುವ 28 ರೂಪಾಯಿ ಬಾಡಿಗೆ ದರವನ್ನು, 30 ರೂಪಾಯಿಗೆ ಏರಿಸಿ ಅಕ್ಟೋಬರ್ 1 ರಿಂದ ಪರಿಷ್ಕೃತ ದರ ಜಾರಿಗೆ ತರುವಂತೆ ಆದೇಶ ಹೊರಡಿಸಿದೆ. ಆದರೆ ಅವಳಿನಗರದ ಆಟೋ ಚಾಲಕರು, ನಮಗೆ ಆಹ್ವಾನಿಸದೇ ದರ ಪರಿಷ್ಕರಣೆ ಮಾಡಲಾಗಿದೆ. ಇದು ಸರಿಯಲ್ಲ. ಕನಿಷ್ಠ 1.6 ಕಿ.ಮೀ ಗೆ 35 ರೂಪಾಯಿ ಹೆಚ್ಚಳ ಮಾಡುವಂತೆ ಒತ್ತಾಯಿಸುತ್ತಿದ್ದಾರೆ.
ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿ ಆಟೋ ರಿಕ್ಷಾ ದರವನ್ನು 2018 ರಲ್ಲಿ ಪರಿಷ್ಕರಣೆ ಮಾಡಲಾಗಿತ್ತು. ಅದನ್ನು ಬಿಟ್ಟು ಈವರೆಗೆ ದರ ಪರಿಷ್ಕರಣೆಯಾಗಿಲ್ಲ. ಪೆಟ್ರೋಲ್ ಮತ್ತು ಎಲ್ ಪಿಜಿ ದರಗಳು ನಿರಂತರವಾಗಿ ಹೆಚ್ಚಳವಾಗುತ್ತಲೇ ಇದೆ. ಹೀಗಾಗಿ ಆಟೋ ರಿಕ್ಷಾ ಪ್ರಯಾಣಿಕರ ದರವನ್ನು ಪ್ರತಿ ಎರಡು ಕಿ.ಮೀ ಗೆ ಕನಿಷ್ಠ ಬಾಡಿಗೆಯನ್ನು 50 ರೂಪಾಯಿ ಮಾಡುವಂತೆ ಮನವಿ ಸಲ್ಲಿಸಲಾಯಿತು. ಆದರೆ ಇದ್ಯಾವುದನ್ನು ಪರಿಗಣಿಸದೆ ಜಿಲ್ಲಾಡಳಿತ ದರವನ್ನು ಪರಿಷ್ಕರಣೆ ಮಾಡಿದೆ ಎಂದು ಆರೋಪಿಸಿದ್ದಾರೆ.
ಪ್ರತಿನಿತ್ಯ ಆಟೋ ಚಾಲಕನೋರ್ವ ದಿನಕ್ಕೆ 500-600 ರೂಪಾಯಿ ದುಡಿಮೆ ಮಾಡುತ್ತಾನೆ. ಅದರಲ್ಲಿ ಪೆಟ್ರೋಲ್ ಎಲ್‌ಜಿಪಿಗೆ ಅರ್ಧ ಹೋಗುತ್ತದೆ. ಇನ್ನುಳಿದ ಹಣದಲ್ಲಿ ಜೀವನ ನಿರ್ವಹಣೆ ಕಷ್ಟ. ಹೀಗಾಗಿ ಜಿಲ್ಲಾಧಿಕಾರಿಗಳು ಮೊದಲು ವೆಟ್ ಆ್ಯಂಡ್ ಮೆಝರ್ ಮೆಂಟ್ ನಲ್ಲಿ ಆಗುತ್ತಿರುವ ಭ್ರಷ್ಟಾಚಾರವನ್ನು ತಡೆಯಬೇಕು. ವ್ಯವಸ್ಥೆಯಲ್ಲಿನ ನೂನ್ಯತೆಗಳನ್ನು ಸರಿಪಡಿಸಬೇಕು. ಆನಂತರ ಪರಿಷ್ಕೃತ ದರವನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿದ್ದಾರೆ..
ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
16/07/2022 01:36 pm