ಅದು ನಾಲ್ಕೈದು ಜಿಲ್ಲೆಯ ಜೀವನಾಡಿಯಾಗಿರುವ ಯೋಜನೆ. ಈ ಯೋಜನೆಯಿಂದ ಅದೆಷ್ಟೋ ಜೀವಿಗಳಿಗೆ ಜೀವ ಜಲ ಸಿಗಲಿದೆ. ಆ ಯೋಜನೆಗೆ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದ್ದರೂ ಕೆಲವೊಂದು ಸಂಘಟನೆಗಳು ಮಾತ್ರ ವಿರೋಧಿಸುತ್ತಿವೆ. ಅಷ್ಟಕ್ಕೂ ಯಾವುದು ಆ ಯೋಜನೆ ಅಂತೀರಾ ಈ ಸ್ಟೋರಿ ನೋಡಿ.
ಬೇಡ್ತಿ-ವರದಾ ನದಿ ಜೋಡಣೆಯ ಯೋಜನೆಯಿಂದ ಹಾಗೂ ನದಿಗಳಿಗೆ ಆಣೆಕಟ್ಟು ನಿರ್ಮಾಣ ಮಾಡುವುದರಿಂದ ಹಾವೇರಿ, ಶಿವಮೊಗ್ಗ, ಹುಬ್ಬಳ್ಳಿ-ಧಾರವಾಡ, ಗದಗ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳಿಗೆ ಮುಖ್ಯವಾಗಿ ಕುಡಿಯುವ ನೀರು ಹಾಗೂ ಸಮಗ್ರ ನೀರಾವರಿಗೆ ಪೂರಕವಾಗಿದೆ.
ಈಗಾಗಲೇ ಬೇಡ್ತಿ, ಶಾಲ್ಮಲಾ, ಅಘನಾಶಿನಿ ನದಿಯ 100 ಟಿಎಂಸಿ ನೀರು ಸಮುದ್ರಕ್ಕೆ ಸೇರುತ್ತಿದ್ದು, ಈ ನದಿಗಳ ಜೋಡಣೆ ಮಾಡುವುದರಿಂದ ಐದಾರು ಜಿಲ್ಲೆಗಳಿಗೆ ಕುಡಿಯುವ ನೀರಿನ ಜ್ವಲಂತ ಸಮಸ್ಯೆಗಳಿಗೆ ಬ್ರೇಕ್ ಹಾಕಬಹುದಾಗಿದೆ. ಈಗಾಗಲೇ ರಾಜ್ಯ ಸರ್ಕಾರ ಕೂಡ ಡಿಪಿಆರ್ ಮಾಡಿದ್ದು, ಆದರೆ ಶಿರಸಿಯ ಕೆಲವು ಸಂಘಟನೆಗಳು ಈ ಯೋಜನೆ ಕಾರ್ಯವನ್ನು ರದ್ದು ಪಡಿಸಿಲು ಒತ್ತಾಯಿಸುತ್ತಿವೆ. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಬೇಡ್ತಿ-ವರದಾ ನದಿ ಜೋಡಣಾ ಹೋರಾಟ ಸಮಿತಿ ಕೂಡಲೇ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಒತ್ತಾಯಿಸಿವೆ.
ಇನ್ನೂ ಕರ್ನಾಟಕ ಸರ್ಕಾರ ಪಶ್ಚಿಮ ವಾಹಿನಿ ಯೋಜನೆಯಲ್ಲಿ 4099 ಕೋಟಿ ರೂಪಾಯಿ ನೀರಾವರಿ ಯೋಜನೆಯ ಮಾಸ್ಟರ್ ಪ್ಲಾನ್ ಮಾಡಿ 2022ರ ಬಜೆಟ್ ನಲ್ಲಿ 505 ಕೋಟಿ ಮೀಸಲು ಇಡಲಾಗಿದೆ. ದಕ್ಷಿಣಕನ್ನಡ, ಉತ್ತರಕನ್ನಡದ ಬೇಡ್ತಿ-ವರದಾ ನದಿ ಜೋಡಣೆ ಯೋಜನೆ ಕಾಮಗಾರಿಗಳ ಡಿಪಿಆರ್ ತಯಾರಿಸಿ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ನೀಡಿದ್ದರೂ ಕೂಡ ತೀವ್ರ ವಿರೋಧ ವ್ಯಕ್ತವಾಗುತ್ತಿದೆ ಎನ್ನುತ್ತಾರೆ ಬೇಡ್ತಿ-ವರದಾ ನದಿ ಜೋಡಣೆ ಹೋರಾಟಗಾರರು.
ಒಟ್ಟಿನಲ್ಲಿ ನದಿ ಜೋಡಣೆ ಕಾರ್ಯದಿಂದ ಐದಾರು ಜಿಲ್ಲೆಯ ಜನರಿಗೆ ಕುಡಿಯುವ ನೀರಿನ ಜೊತೆಗೆ ಕೃಷಿ ಕಾರ್ಯಕ್ಕೆ ಉತ್ತೇಜನ ಸಿಗುತ್ತದೆ ಎಂಬುವುದು ಹೋರಾಟಗಾರರ ಮಾತು. ಈ ಬಗ್ಗೆ ಸರ್ಕಾರ ಮಧ್ಯಪ್ರವೇಶಿಸಿ ಸೂಕ್ತ ನಿರ್ಧಾರದ ಮೂಲಕ ಈ ಗೊಂದಲಕ್ಕೆ ಬ್ರೇಕ್ ಹಾಕಬೇಕಿದೆ.
Kshetra Samachara
13/06/2022 03:44 pm