ವಾಣಿಜ್ಯ ನಗರಿ ಹುಬ್ಬಳ್ಳಿಗೆ ದಿನಂಪ್ರತಿ ಸಾವಿರಾರು ಜನ ಕೆಲಸ ಅರಸಿ ಬರುತ್ತಾರೆ. ಆದರೆ ವಾಯುವ್ಯ ಸಾರಿಗೆ ಸಂಸ್ಥೆ ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕಿದ್ದಾರೆ. ಹೌದು… ಹುಬ್ಬಳ್ಳಿ-ಗದಗ ನಡುವೆ ಪ್ರಯಾಣಿಸುವ ಬಸ್‌ಗಳ ದರವನ್ನು ಸಾರಿಗೆ ಸಂಸ್ಥೆ ದಿಢೀರ್ ಆಗಿ 15 ರೂ. ಹೆಚ್ಚಿಸಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಹುಬ್ಬಳ್ಳಿಯಿಂದ ಗದಗ ನಡುವೆ 60 ಕಿಲೋ ಮೀಟರ್ ಇದೆ. ಪ್ರಯಾಣಕ್ಕೆ 60 ರೂ.ಗಳ ದರವನ್ನು ನಿಗದಿ ಮಾಡಲಾಗಿತ್ತು. ಈಗ ಇದ್ದಕ್ಕಿದ್ದಂತೆ 15 ರೂ. ಹೆಚ್ಚಿಸಿದ್ದಾರೆ. ಹುಬ್ಬಳ್ಳಿಗೆ ನಿತ್ಯ ಗದಗ ಭಾಗದಿಂದ ರೈತರು, ವ್ಯಾಪಾರಸ್ಥರು, ವಿವಿಧ ಖಾಸಗಿ ನೌಕರರು, ಅಂಗಡಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಬರುತ್ತಾರೆ. ಈ ರೀತಿಯಾಗಿ ಏಕಾಏಕಿ ದರ ಏರಿಕೆ ಮಾಡಿರುವುದರಿಂದ ಆರ್ಥಿಕವಾಗಿ ಹೊಡೆತ ಬೀಳಲಿದೆ. ಅಲ್ಲದೆ ಸರ್ಕಾರ ಟೋಲ್ ಶುಲ್ಕ ಪಾವತಿಸಲು ಸಾರ್ವಜನಿಕರಿಂದ ಹಣ ಸುಲಿಗೆ ಮಾಡುತ್ತಿರುವುದು ಸರಿಯಲ್ಲ. ಕೂಡಲೇ ದರ ಪರಿಷ್ಕರಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಹುಬ್ಬಳ್ಳಿ- ಗದಗ ಮಧ್ಯೆ ನೂತನವಾಗಿ ನಲವಡಿ ಬಳಿ ಟೋಲ್ ಸಂಗ್ರಹ ಕೇಂದ್ರ ಸ್ಥಾಪಿಸಲಾಗಿದೆ. ಈ ಮೂಲಕ ಸಂಚಾರ ಮಾಡುವ ವಾಹನಗಳಿಗೆ ಟೋಲ್ ವಸೂಲಿ ಮಾಡುತ್ತಿರುವುದು ದರ ಹೆಚ್ಚಳಕ್ಕೆ ಮುಖ್ಯ ಕಾರಣವಾಗಿದೆ ಎನ್ನಲಾಗಿದೆ. ಆದರೆ ಟೋಲ್ ಹಣಕ್ಕಾಗಿ ಪ್ರತಿ ಪ್ರಯಾಣಿಕನಿಂದ 15 ರೂ. ಹೆಚ್ಚುವರಿ ವಸೂಲಿ ಮಾಡುತ್ತಿರುವುದಕ್ಕೆ ಸಾರ್ವಜನಿಕರು ಖಂಡಿಸಿದ್ದಾರೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಪರಿಷ್ಕರಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕಾಗಿದೆ.
ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
07/04/2022 04:22 pm