ಧಾರವಾಡ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಡಿಸೆಂಬರ್ 13 ರಂದು ಜಿಲ್ಲೆಯಲ್ಲಿ ಮತದಾರರ ನೋಂದಣಿಗೆ ವಿಶೇಷ ಆಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು.
ಅವರು ಇಂದು ಸಂಜೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಭಾರತ ಚುನಾವಣಾ ಆಯೋಗದ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ವಿಡಿಯೋ ಸಂವಾದದಲ್ಲಿ ಭಾಗವಹಿಸಿದ ನಂತರ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು.
ಧಾರವಾಡ ಜಿಲ್ಲೆಯ ಎಲ್ಲ 1634 ಮತಗಟ್ಟೆಗಳಲ್ಲಿ ಡಿಸೆಂಬರ್ 13 ರ ಭಾನುವಾರದಂದು ಮತದಾರರ ನೋಂದಣಿಗೆ ವಿಶೇಷ ಆಂದೋಲನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಪ್ರತಿ ಮತಗಟ್ಟೆಯಲ್ಲಿ ಅಂದು ಮತಗಟ್ಟೆ ಅಧಿಕಾರಿಗಳು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ಉಪಸ್ಥಿತರಿದ್ದು, ಅರ್ಹ ನಾಗರಿಕರಿಂದ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು ಅರ್ಜಿ ಸ್ವೀಕರಿಸಲಿದ್ದಾರೆ.
ಜನವರಿ 1,2021ಕ್ಕೆ 18 ವರ್ಷ ತುಂಬುವ ಯುವ ಮತದಾರರು ನಮೂನೆ-6 ರಲ್ಲಿ ಅಗತ್ಯ ದಾಖಲಾತಿಗಳೊಂದಿಗೆ ಅಥವಾ ಆನ್ ಲೈನ್ https://www.nvsp.in/ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಅವರು ತಿಳಿಸಿದ್ದಾರೆ.
ಮತದಾರರ ಹೆಸರು ಸೆರ್ಪಡೆಗೆ ನಮೂನೆ-6, ಮತದಾರರ ಹೆಸರು ತೆಗೆದು ಹಾಕಲು ನಮೂನೆ-7, ಹೆಸರು ತಿದ್ದುಪಡಿಗೆ ನಮೂನೆ-8 ಮತ್ತು ವಿಧಾನಸಭಾ ಮತಕ್ಷೇತ್ರದೊಳಗೆ ಹೆಸರು ವರ್ಗಾವಣೆಗೆ ನಮೂನೆ -8 ಎ ರಲ್ಲಿ ಮತದಾರರು ಅರ್ಜಿ ಸಲ್ಲಿಸಬೇಕು. ಈ ಮತದಾರರ ನೋಂದಣಿ ವಿಶೇಷ ಅಭಿಯಾನದ ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಕಳೆದ ನವೆಂಬರ್ 18,2020 ರಂದು ಜಿಲ್ಲೆಯ ಮತದಾರರ ಕರಡು ಮತದಾರರ ಪಟ್ಟಿಯನ್ನು ಈಗಾಗಲೇ ಪ್ರಕಟಿಸಲಾಗಿದೆ. ಪ್ರಕಟಿತ ಕರಡು ಮತದಾರರ ಪಟ್ಟಿಯನ್ನು dharwad.nic.in ಮತ್ತು ceokarnataka.kar.nic.in ಜಾಲತಾಣಗಳಲ್ಲಿ ಪ್ರಕಟಿಸಲಾಗಿದೆ ಮತ್ತು ಮತದಾರರ ಪರಿಶಿಲನೆಗಾಗಿ ಮುದ್ರಿತ ಪ್ರತಿಗಳು ಜಿಲ್ಲಾಧಿಕಾರಿಗಳ ಕಚೇರಿಯ ಚುನಾವಣಾ ಶಾಖೆ, ತಹಶೀಲ್ದಾರ ಕಾರ್ಯಾಲಯ, ಮಹಾನಗರ ಪಾಲಿಕೆಯ ಚುನಾವಣಾ ಶಾಖೆಗಳಲ್ಲಿ ಲಭ್ಯವಿದೆ ಎಂದು ಅವರು ತಿಳಿಸಿದರು.
Kshetra Samachara
11/12/2020 08:47 pm