ಧಾರವಾಡ: 2021-22ನೇ ಸಾಲಿನ ಹಿಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯ ಡಿಸೆಂಬರ್ 8 ರಿಂದ ಆರಂಭಗೊಂಡಿದೆ. ಕಳೆದ ಸಾಲಿನಂತೆ ಪ್ರಸಕ್ತ ಸಾಲಿನಲ್ಲಿ ಕೂಡ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಗಳನ್ನು ತಾವೇ ಸ್ವತಃ ಛಾಯಾಚಿತ್ರ ಸಮೇತ ಸಮೀಕ್ಷೆ ಮಾಡಬಹುದಾಗಿದೆ. ಹಿಂಗಾರು ಹಂಗಾಮಿನ ಬೆಳೆ ವಿವರ ದಾಖಲಿಸುವ ಮೂಲಕ ಸಮೀಕ್ಷೆ ಕೈಗೊಳ್ಳಲು “ಹಿಂಗಾರು ರೈತರ ಬೆಳೆ ಸಮೀಕ್ಷೆ 2021-22” ಎಂಬ ಹೆಸರಿನ ಮೊಬೈಲ್ ಆ್ಯಪ್‍ನ್ನು ಗೂಗಲ್ ಪ್ಲೇ ಸ್ಟೋರನಿಂದ ಡೌನಲೋಡ್ ಮಾಡಿಕೊಳ್ಳಬಹುದಾಗಿದೆ. ಮೊಬೈಲ್ ಆ್ಯಪ್ ಬಳಸುವಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳ, ತೋಟಗಾರಿಕೆ ಇಲಾಖೆಯ ಅಧಿಕಾರಿಗಳ, ಕಂದಾಯ ಇಲಾಖೆಯ ಅಧಿಕಾರಿಗಳ ಅಥವಾ ಬೆಳೆ ಸಮೀಕ್ಷೆ ಕೈಗೊಂಡ ಖಾಸಗಿ ನಿವಾಸಿಗಳ ನೆರವು ಪಡೆಯಬಹುದಾಗಿದೆ.
ಬೆಳೆ ಸಮೀಕ್ಷೆ ದತ್ತಾಂಶವನ್ನು ಕೃಷಿ, ತೋಟಗಾರಿಕೆ, ರೇಷ್ಮೆ ಬೆಳೆಗಳ ವಿಸ್ತೀರ್ಣ ಲೆಕ್ಕ ಹಾಕುವ ಕಾರ್ಯದಲ್ಲಿ ಬೆಳೆ ವಿಮೆ ಯೋಜನೆಯ ಸರ್ವೇ ನಂಬರ್‌ವಾರು ಬೆಳೆ ಪರಿಶೀಲನೆ ಹಾಗೂ ಬೆಳೆ ಕಟಾವು ಪ್ರಯೋಗಗಳನ್ನು ಕೈಗೊಳ್ಳಲು, ಕನಿಷ್ಠ ಬೆಂಬಲ ಬೆಲೆ ಯೋಜನೆಯ ಅರ್ಹ ಫಲಾನುಭವಿಗಳನ್ನು ಗುರುತಿಸಲು, ಆರ್.ಟಿ.ಸಿ ಯಲ್ಲಿ ಬೆಳೆ ವಿವರ ದಾಖಲಾತಿಗಾಗಿ, ಎನ್.ಡಿ.ಆರ್.ಎಫ್ ಮತ್ತು ಎಸ್.ಡಿ.ಆರ್.ಎಫ್ ಅಥವಾ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಬೆಳೆ ಹಾನಿ ಕುರಿತು ವರದಿ ಸಿದ್ಧಪಡಿಸುವಲ್ಲಿ ಮತ್ತು ಅರ್ಹ ಫಲಾನುಭವಿಗಳ ಪಟ್ಟಿ ತಯಾರಿಸುವ ಸಂದರ್ಭದಲ್ಲಿ ಬೆಳೆ ಸಮೀಕ್ಷೆ ಆಧಾರವಾಗಿಟ್ಟಕೊಂಡು ಸಿದ್ಧಪಡಿಸುವುದರಿಂದ ರೈತರು ತಪ್ಪದೇ ತಮ್ಮ ಜಮೀನಿನಲ್ಲಿರುವ ಕೃಷಿ, ತೋಟಗಾರಿಕೆ, ಅರಣ್ಯ, ರೇಷ್ಮೆ ಬೆಳೆಗಳ ವಿವರವನ್ನು ಆ್ಯಪ್‍ನಲ್ಲಿ ನಮೂದಿಸಬೇಕು.
ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳು, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು, ಸಹಾಯಕ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು, ರೇಷ್ಮೆ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Kshetra Samachara
13/12/2021 08:45 pm