ಹುಬ್ಬಳ್ಳಿ: ಕರ್ನಾಟಕ ರಾಜ್ಯದ ಶಿಕ್ಷಣ ಇಲಾಖೆಯ ಶಿಕ್ಷಕರ ವಿವಿಧ ಬೇಡಿಕೆಗಳು ನೆನಗುದಿಗೆ ಬಿದ್ದಿದ್ದು, ಜೂನ್ 15 ರೊಳಗೆ ಬೇಡಿಕೆ ಈಡೇರಿಸಬೇಕು. ಇಲ್ಲದಿದ್ದರೆ ಅಹಿಂಸಾತ್ಮಕ ಚಳುವಳಿ ಹೋರಾಟ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಅಶೋಕ ಸಜ್ಜನ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ.
ನಗರದಲ್ಲಿಂದು ಮಾತನಾಡಿದ ಅವರು, ಶೀಘ್ರವಾಗಿ ಕೇಂದ್ರ ಮಾದರಿ ಏಳನೇ ವೇತನ ಆಯೋಗ ಸಮಿತಿ ರಚಿಸಬೇಕು. ವಿಳಂಬವಾದಲ್ಲಿ ಶೇ. ಇಪ್ಪತೈದು ಮಧ್ಯಂತರ ಪರಿಹಾರ ನೀಡಬೇಕು, ಹೊಸ ಪಿಂಚಣಿ ಯೋಜನೆ ಕೈಬಿಟ್ಟು ಹಳೆ ಪಿಂಚಣಿ ಯೋಜನೆ ಶೀಘ್ರವಾಗಿ ಜಾರಿಗೊಳಿಸಬೇಕು, ಗ್ರಾಮೀಣ ಶಿಕ್ಷಕರಿಗೆ 5 ಸಾವಿರ ರೂ. ಗ್ರಾಮೀಣ ಭತ್ಯೆ ನೀಡಬೇಕು, ವರ್ಗಾವಣೆ ಕಾಯ್ದೆ ತಿದ್ದುಪಡಿ ಮಾಡಿ ವರ್ಗಾವಣೆ ನಡೆಸಬೇಕು, ಆರು ವರ್ಷಗಳಲ್ಲಿ ಮೂರು ಬಾರಿ ಮಾತ್ರ ವರ್ಗಾವಣೆಯಾಗಿದ್ದು, ಈ ಕೂಡಲೇ ಈ ಸಾಲಿನ ವರ್ಗಾವಣೆ ಪ್ರಕ್ರಿಯೆ ಪ್ರಾರಂಭಿಸಬೇಕು, ಹೊಸ ತಾಲೂಕುಗಳಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ನೇಮಿಸಿ ಕಾರ್ಯಾಲಯ ಆರಂಭಿಸಬೇಕು, ಉ. ಕದಲ್ಲಿ ಬೃಹತ್ ಶಿಕ್ಷಕ ಸದನವನ್ನು ಹುಬ್ಬಳ್ಳಿ ಅಥವಾ ಧಾರವಾಡದಲ್ಲಿ ನಿರ್ಮಿಸಬೇಕು.
ಸದ್ಯ ಬೆಂಗಳೂರಿನಲ್ಲಿ ಶಿಕ್ಷಕ ಸದನವನ್ನು ನವೀಕರಿಸಬೇಕು, ಕಲಿಕಾ ಚೇತನ ತರಬೇತಿಯನ್ನು ಮೇ 15 ರ ನಂತರ ಪ್ರಾರಂಭಿಸಬೇಕು. ಶಾಲೆಗಳನ್ನು ಬೇಸಿಗೆ ರಜೆ ಪೂರ್ಣ ನೀಡಬೇಕು ಹಾಗೂ ಜೂ. 1 ಕ್ಕೆ ಶಾಲೆ ಪ್ರಾರಂಭಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿದರು.
Kshetra Samachara
27/04/2022 01:15 pm