ಧಾರವಾಡ: ಕೊರೊನಾ ಬಂದಿದ್ದೇ ಬಂದಿದ್ದು, ಅದರಿಂದ ತಮ್ಮ ಉಜ್ವಲ ಭವಿಷ್ಯ ಹಾಳು ಮಾಡಿಕೊಳ್ಳದವರೇ ಇಲ್ಲ. ಈಗ ಅದೇ ಸಾಲಿನಲ್ಲಿ ರಾಜ್ಯದ ಐದು ಜನ ನರ್ಸಿಂಗ್ ವಿದ್ಯಾರ್ಥಿನಿಯರು ತಮ್ಮ ಭವಿಷ್ಯ ಹಾಳಾಗುತ್ತದೆ ಎಂಬ ಚಿಂತೆಯಲ್ಲಿದ್ದಾರೆ.
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನರ್ಸಿಂಗ್ ಕೋರ್ಸ್ ಗೆ ಪ್ರವೇಶಾತಿ ಪಡೆದ ವಿದ್ಯಾರ್ಥಿನಿಯರಿಗೆ 2 ವರ್ಷ ನರ್ಸಿಂಗ್ ತರಬೇತಿ ನೀಡಲಾಗುತ್ತದೆ. ಈ ಅವಧಿಯಲ್ಲಿ, ವಿವಾಹವಾದ ವಿದ್ಯಾರ್ಥಿನಿಯರು ಗರ್ಭವತಿಯರಾದರೆ ಅವರನ್ನು ತರಬೇತಿಯಿಂದ ವಿಮುಕ್ತಗೊಳಿಸಿ ಅವರಿಗೆ ಪರೀಕ್ಷೆಗೂ ಅವಕಾಶ ನೀಡಬಾರದು ಎಂಬ ನಿಯಮಾವಳಿ ಇದೆಯಂತೆ. ತರಬೇತಿ ಅವಧಿಯಲ್ಲಿ ವಿದ್ಯಾರ್ಥಿನಿಯರಿಗೆ ರಜೆ ಕೂಡ ನೀಡಲಾಗುವುದಿಲ್ಲ.
ಆದರೆ, ಕೊರೊನಾದಿಂದಾಗಿ ಆದ ಲಾಕಡೌನ್ ನಿಂದ ವಿದ್ಯಾರ್ಥಿನಿಯರು ಮೂರು ತಿಂಗಳು ಮನೆಯಲ್ಲಿ ಕುಳಿತುಕೊಳ್ಳಬೇಕಾಯಿತು. ಈ ಲಾಕಡೌನ್ ಆಗದೇ ಹೋಗಿದ್ದರೆ ವಿದ್ಯಾರ್ಥಿನಿಯರು ತಮ್ಮ ತರಬೇತಿ ಅವಧಿ ಮುಗಿಸಿ ಪರೀಕ್ಷೆಗೂ ಸಿದ್ಧರಾಗಬೇಕಾಗಿತ್ತು. ಲಾಕಡೌನ್ ಅವಧಿಯಲ್ಲಿ ವಿವಾಹವಾದ ಗರ್ಭವತಿ ವಿದ್ಯಾರ್ಥಿನಿಯರಿಗೆ ರಿಯಾಯ್ತಿ ನೀಡಬೇಕಿದ್ದ ಸರ್ಕಾರ, ಪರೀಕ್ಷೆ ಇನ್ನೊಂದು ತಿಂಗಳು ಬಾಕಿ ಇರುವಾಗಲೇ ಅವರನ್ನು ತರಬೇತಿಯಿಂದ ವಿಮುಕ್ತಗೊಳಿಸಿ ಹೊರಗೆ ಹಾಕುತ್ತಿದೆ.
ಎರಡು ವರ್ಷ ನಾವು ಪಟ್ಟ ಕಷ್ಟಕ್ಕೆ ಬೆಲೆಯೇ ಇಲ್ಲದಂತಾಗಿದೆ. ಮುಂದಿನ ತಿಂಗಳು ನಡೆಯಲಿರುವ ಪರೀಕ್ಷೆಗಾದರೂ ಕುಳಿತುಕೊಳ್ಳಲು ಸರ್ಕಾರ ಅವಕಾಶ ನೀಡಬೇಕು. ಸರ್ಕಾರದ ನಿರ್ಧಾರದ ಮೇಲೆ ನಮ್ಮ ಭವಿಷ್ಯ ನಿಂತಿದೆ. ಸರ್ಕಾರ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು ಎಂಬುದು ವಿದ್ಯಾರ್ಥಿನಿಯರ ಒತ್ತಾಯವಾಗಿದೆ.
ಆರೋಗ್ಯ ಸಚಿವ ಡಾ.ಕೆ.ಸುಧಾಕರ ಅವರ ತವರು ಕ್ಷೇತ್ರ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೇ ಓರ್ವ ವಿದ್ಯಾರ್ಥಿನಿ ಈ ಪರೀಕ್ಷೆಯಿಂದ ವಂಚಿತಳಾಗುತ್ತಿದ್ದಾಳೆ. ರಾಜ್ಯದ ಧಾರವಾಡ, ಹಾಸನ, ಹಾವೇರಿ, ಕಲಬುರ್ಗಿ ಜಿಲ್ಲೆಯಲ್ಲಿ ಒಟ್ಟು ಐದು ಜನ ವಿದ್ಯಾರ್ಥಿನಿಯರು ನರ್ಸಿಂಗ್ ಕೋರ್ಸ್ ಪಡೆದು ಪರೀಕ್ಷೆಯಿಂದ ವಂಚಿತರಾಗುತ್ತಿದ್ದಾರೆ. ಕೊರೊನಾ ಬರುತ್ತದೆ, ಲಾಕಡೌನ್ ಆಗುತ್ತದೆ ಎಂದು ಯಾರೂ ಊಹೆ ಮಾಡಿರಲಿಲ್ಲ. ಆದರೆ, ಲಾಕಡೌನ್ ನಿಂದಾಗಿ ಈ ಐದು ಜನ ವಿದ್ಯಾರ್ಥಿನಿಯರು ಇದೀಗ ಪರೀಕ್ಷೆಯಿಂದ ವಂಚಿತರಾಗುತ್ತಿದ್ದಾರೆ. ಈ ಐದೂ ಜನ ವಿದ್ಯಾರ್ಥಿನಿಯರ ಎರಡು ವರ್ಷದ ಶ್ರಮ ಹಾಳಾಗದಂತೆ ಅವರಿಗೆ ಪರೀಕ್ಷೆಗಾದರೂ ಅವಕಾಶ ಮಾಡಿಕೊಡಬೇಕು ಎಂಬ ಒತ್ತಾಯ ಕೇಳಿ ಬರುತ್ತಿದೆ.
ಸದ್ಯ ಗರ್ಭಿಣಿಯರಾಗಿರುವ ಈ ವಿದ್ಯಾರ್ಥಿನಿಯರು ಇನ್ನೂ ಆರೋಗ್ಯದಿಂದಲೇ ಇದ್ದಾರೆ. ಪರೀಕ್ಷೆ ಬರೆಯಲು ಕೂಡ ಶಕ್ತರಿದ್ದಾರೆ. ಹೀಗಾಗಿ ರಾಜ್ಯದ ಐದೂ ಜನ ನರ್ಸಿಂಗ್ ವಿದ್ಯಾರ್ಥಿನಿಯರಿಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟು, ಸರ್ಕಾರ ಅವರ ಭವಿಷ್ಯವನ್ನು ಕಟ್ಟಿಕೊಡಬೇಕಾಗಿದೆ. ಒಂದು ವೇಳೆ ಈ ವಿದ್ಯಾರ್ಥಿನಿಯರು ಈ ಪರೀಕ್ಷೆಯಿಂದ ವಂಚಿತರಾದರೆ ಮುಂದೆ ಮತ್ತೊಂದು ವರ್ಷ ಅವರು ತರಬೇತಿ ಪಡೆಯಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಆರೋಗ್ಯ ಸಚಿವರು ಈ ಬಗ್ಗೆ ಗಮನಹರಿಸಿ ವಿದ್ಯಾರ್ಥಿಗಳ ಭವಿಷ್ಯವನ್ನು ಉಜ್ವಲಗೊಳಿಸಬೇಕಾಗಿದೆ ಎಂಬುದೇ ಪಬ್ಲಿಕ್ ನೆಕ್ಸ್ಟ್ ಕಳಕಳಿ.
-ಪ್ರವೀಣ ಓಂಕಾರಿ, ಪಬ್ಲಿಕ್ ನೆಕ್ಸ್ಟ್, ಧಾರವಾಡ.
Kshetra Samachara
17/02/2021 05:21 pm