2021 ರಲ್ಲಿ ಉಡುಪಿಯಲ್ಲಿ ನಡೆದಿದ್ದ ಸೇನಾ ಭರ್ತಿ ರ‍್ಯಾಲಿಯಲ್ಲಿ ದೈಹಿಕ ಪರೀಕ್ಷೆ ಪಾಸಾದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಸುವಂತೆ ಒತ್ತಾಯಿಸಿ ದೈಹಿಕ ಪರೀಕ್ಷೆ ಪಾಸಾದ ನೂರಾರು ಸೇನಾ ಅಭ್ಯರ್ಥಿಗಳು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಮುಖಾಂತರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಮನವಿ ಸಲ್ಲಿಸಿದರು.
2021ರಲ್ಲಿ ಉಡುಪಿಯಲ್ಲಿ ಸೇನಾ ಭರ್ತಿ ರ‍್ಯಾಲಿ ನಡೆದಿತ್ತು. ಇದರಲ್ಲಿ ಸಾವಿರಾರು ಅಭ್ಯರ್ಥಿಗಳು ದೈಹಿಕ ಪರೀಕ್ಷೆ ಪಾಸಾಗಿ, ಲಿಖಿತ ಪರೀಕ್ಷೆಗೆ ತಯಾರಿ ನಡೆಸಿದ್ದರು. ಆದರೆ, ಕಳೆದ ಒಂದೂವರೆ ವರ್ಷದಿಂದ ಕೇಂದ್ರ ಸರ್ಕಾರ ಲಿಖಿತ ಪರೀಕ್ಷೆಯನ್ನೇ ನಡೆಸಿಲ್ಲ. ಕೋವಿಡ್, ನೆರೆ ಪ್ರವಾಹದ ನೆಪ ಹೇಳಿ ಪರೀಕ್ಷೆ ಮುಂದೂಡುತ್ತಲೇ ಬಂದಿದೆ. 2021ರಲ್ಲೇ ನಾವು ದೈಹಿಕ ಪರೀಕ್ಷೆ ಪಾಸು ಮಾಡಿದ್ದೇವೆ. ಇದುವರೆಗೂ ಲಿಖಿತ ಪರೀಕ್ಷೆ ನಡೆಸದೇ ಇರುವುದರಿಂದ ನಮ್ಮ ವಯಸ್ಸಿನಲ್ಲಿ ವ್ಯತ್ಯಾಸವಾಗಿ ನಮಗೆ ಭರ್ತಿಯನ್ನೇ ನೀಡದೇ ಇದ್ದರೆ ಹೇಗೆ? ಎಂದು ಅಭ್ಯರ್ಥಿಗಳು ಆತಂಕ ಎದುರಿಸುವಂತಾಗಿದೆ.
2021ರಲ್ಲೇ ದೈಹಿಕ ಪರೀಕ್ಷೆ ಪಾಸಾಗಿರುವ ನಾವು ಸಾಕಷ್ಟು ಹಣ ಖರ್ಚು ಮಾಡಿ ಲಿಖಿತ ಪರೀಕ್ಷೆಗಾಗಿ ಕೋಚಿಂಗ್ ಪಡೆಯುತ್ತಿದ್ದೇವೆ. ಆದರೆ, ಇದುವರೆಗೂ ಲಿಖಿತ ಪರೀಕ್ಷೆಯ ಸುಳಿವನ್ನೇ ನೀಡುತ್ತಿಲ್ಲ. ನಮಗೆ ಅಗ್ನಿಪಥ್ ಯೋಜನೆಯಲ್ಲಿ ಬನ್ನಿ ಎಂದು ಹೇಳಲಾಗುತ್ತಿದೆ. ನಾವು ನೇರವಾಗಿ ದೈಹಿಕ ಪರೀಕ್ಷೆಯಲ್ಲಿ ಪಾಸಾಗಿದ್ದು, ಅಗ್ನಿಪಥ್ ಯೋಜನೆಗೆ ನಮ್ಮನ್ನು ಒಳಪಡಿಸದೇ ನೇರವಾಗಿ ಲಿಖಿತ ಪರೀಕ್ಷೆ ನಡೆಸಬೇಕು ಎಂದು ಅಭ್ಯರ್ಥಿಗಳು ಒತ್ತಾಯಿಸಿದರು.
ಸದ್ಯ, ಅಭ್ಯರ್ಥಿಗಳು ರಕ್ಷಣಾ ಸಚಿವರಿಗೆ ಮನವಿ ಸಲ್ಲಿಸಿದ್ದು, ಸಚಿವರು ಈ ಬಗ್ಗೆ ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
16/06/2022 06:17 pm