ಧಾರವಾಡ: ಸರ್ಕಾರದ ಆದೇಶದಂತೆ ಬರುವ ಜ.1 ರಿಂದ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ತರಗತಿಗಳನ್ನು ಪ್ರಾರಂಭಿಸಲಾಗುವುದು, ಆದರೆ ವಿದ್ಯಾರ್ಥಿಗಳಿಗೆ ಹಾಜರಾತಿ ಕಡ್ಡಾಯವಲ್ಲ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಬಿ.ಸುಶೀಲಾ ಅವರು ತಿಳಿಸಿದರು.
ಜಿಲ್ಲಾ ಪಂಚಾಯತ ಸಭಾಂಗಣದಲ್ಲಿಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜ್ಯದಾದ್ಯಂತ ಜ.1 ರಿಂದ ಸರ್ಕಾರಿ ಅನುದಾನಿತ, ಅನುದಾನ ರಹಿತ ಶಾಲೆ ಮತ್ತು ಕಾಲೇಜುಗಳನ್ನು ಪುನಾರಂಭಿಸಲು ನಿರ್ಧರಿಸಲಾಗಿರುವುದರಿಂದ ನಮ್ಮ ಧಾರವಾಡ ಜಿಲ್ಲೆಯಲ್ಲಿ ಕೂಡ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ತರಗತಿಗಳನ್ನು ಪ್ರಾರಂಭಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಹಾಜರಾತಿ ಕಡ್ಡಾಯವಾಗಿರುವುದಿಲ್ಲ, ಆಸಕ್ತ ವಿದ್ಯಾರ್ಥಿಗಳು ಅವರ ಪಾಲಕರಿಂದ ನಮ್ಮ ಮಕ್ಕಳು ತರಗತಿಗೆ ಹಾಜರಾಗಲು ಅಭ್ಯಂತರವಿಲ್ಲ ಎಂಬ ಅನುಮತಿ ಪತ್ರದೊಂದಿಗೆ ತರಗತಿಗಳಿಗೆ ಹಾಜರಾಗಬಹುದಾಗಿರುತ್ತದೆ. ಕೇವಲ ಮೂರು ಅವಧಿಗಳನ್ನು ತೆಗೆದುಕೊಳ್ಳುವ ಮೂಲಕ ಅರ್ಧ ದಿನದ ಶಾಲೆಯನ್ನು ನಡೆಸಲಾಗುವುದು. ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಬಿಸಿಯೂಟ ವ್ಯವಸ್ಥೆ ಇರುವುದಿಲ್ಲ. ಇಚ್ಛೆಯುಳ್ಳ ವಿದ್ಯಾರ್ಥಿಗಳು ತಾವೇ ಊಟ ತರಬಹುದಾಗಿರುತ್ತದೆ. ರೇಷನ್ ನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಗುವುದು.
6 ರಿಂದ 9 ನೇ ತರಗತಿ ವಿದ್ಯಾರ್ಥಿಗಳಿಗೂ ಕೂಡಾ ಜನವರಿ 1 ರಿಂದ ವಿದ್ಯಾಗಮ ಪ್ರಾರಂಭಿಸಲಾಗುತ್ತಿದೆ. ಎಸ್ಒಪಿ ಯನ್ನು ಕಡ್ಡಾಯವಾಗಿ ಪಾಲಿಸಲು ಸೂಚಿಸಲಾಗಿದೆ. ವಿದ್ಯಾಗಮಕ್ಕೆ ವಿದ್ಯಾರ್ಥಿಗಳು ಹಾಜರಾಗಲು ಅನುಕೂಲವಾಗುವಂತೆ 15 ವಿದ್ಯಾರ್ಥಿಗಳಂತೆ ಒಂದೊಂದು ತಂಡಗಳನ್ನು ರಚಿಸಿಕೊಂಡು, ಪ್ರತಿ ತಂಡಕ್ಕೂ ಒಂದು ದಿನ ಬಿಟ್ಟು ಒಂದು ದಿನ ಪಾಠ ಬೋಧನೆ ಮಾಡಲಾಗುವುದು. ಪ್ರತಿ ಶಾಲಾ ಕಾಲೇಜಿನಲ್ಲಿ ಒಂದು ಕೊಠಡಿಯನ್ನು ಐಸೋಲೆಶನ್ ಕೊಠಡಿಯಾಗಿ ಮಾಡಲಾಗುವುದು. ಇದರಿಂದ ತುರ್ತು ಸಂದಂರ್ಭದಲ್ಲಿ ವಿದ್ಯಾರ್ಥಿಗಳಿಗೆ ಚಿಕಿತ್ಸೆ ಮತ್ತು ವಿಶ್ರಾಂತಿ ಪಡೆಯಲು ಅನಕೂಲವಾಗುವುದು.
ಶಿಕ್ಷಕರು ಆರ್.ಟಿ.ಪಿ.ಸಿ.ಆರ್ ಪರೀಕ್ಷೆ ಮಾಡಿಸಿ ಕೊಳ್ಳುವುದು. ಎಲ್ಲಾ ಸರ್ಕಾರಿ ಶಾಲಾ, ಕಾಲೇಜುಗಳ ಶಿಕ್ಷಕರಿಗೆ ಆಯಾ ಶಾಲಾ ಕಾಲೇಜುಗಳ ಪ್ರಾಂಶುಪಾಲರಿಗೆ ಮತ್ತು ಎಸ್.ಡಿ.ಎಮ್.ಸಿ (ಶಾಲಾ ಮೇಲುಸ್ತುವಾರಿ ಸಮಿತಿ) ಮುಖ್ಯಸ್ಥರಿಗೆ ತಮ್ಮ ತಮ್ಮ ಶಾಲೆ ಮತ್ತು ಕಾಲೇಜುಗಳನ್ನು ಸ್ವಚ್ಛಗೊಳಿಸಿ, ಸ್ಯಾನಿಟೈಸ್ ಮಾಡುವಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಈ ಎಲ್ಲಾ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳುತ್ತಿರುವುದರಿಂದ ಪೋಷಕರು ಭಯಭೀತರಾಗದೆ ತಮ್ಮ ಮಕ್ಕಳನ್ನು ಶಾಲಾ, ಕಾಲೇಜುಗಳಿಗೆ ಕಳಿಸಬಹುದಾಗಿರುತ್ತದೆ. ಶಿಕ್ಷಕರೂ ಸಹ ನಿರಾಂತಕವಾಗಿ ಬೋಧನೆ ಮಾಡಬಹುದೆಂದು ಹೇಳಿದರು.
ಈ ಸಂದರ್ಭದಲ್ಲಿ ಡಿಡಿಪಿಐ ಮೋಹನಕುಮಾರ್ ಹಂಚಾಟೆ ಮತ್ತು ಜಿಲ್ಲೆಯ ಎಲ್ಲಾ ಕ್ಷೇತ್ರಶಿಕ್ಷಣಾಧಿಕಾರಿಗಳು ಉಪಸ್ಥಿತರಿದ್ದರು.
Kshetra Samachara
23/12/2020 11:24 pm