ಕುಂದಗೋಳ:ಇತ್ತೀಚಿಗೆ ಸುರಿದ ಮಳೆಗೆ ಉತ್ಸಾಹದಿಂದ ಮುಂಗಾರು ಬಿತ್ತನೆ ಮಾಡಿದ ರೈತರ ಮೇಲೆ ಕಳೆದ ಹಲವಾರು ದಿನಗಳಿಂದ ಮತ್ತೇ ವರುಣ ಮುನಿಸಿಕೊಂಡ ಕಾರಣ ರೈತಾಪಿ ಜನ ಮಳೆಗಾಗಿ ದೇವರ ಮೋರೆ ಹೋಗಿದ್ದಾರೆ.
ಹೌದು ! ಕುಂದಗೋಳ ತಾಲೂಕಿನ ಎಲ್ಲೆಡೆ ಮೊದಲು ಧಾರಾಕಾರ ಸುರಿದ ಮಳೆಗೆ ರೈತರು ಶೇಂಗಾ, ಹೆಸರು, ಹತ್ತಿ ಇತರೆ ಬೀಜಗಳನ್ನು ಬಿತ್ತನೆ ಮಾಡಿದ್ದಾರೆ.
ಆದರೆ, ಕಳೆದ ಇಪ್ಪತ್ತು ದಿನಗಳಿಂದ ಕುಂದಗೋಳ ತಾಲೂಕಿನ ಎಲ್ಲೆಡೆ ಮಳೆ ಮಾಯವಾಗಿ ಬಿರು ಬಿಸಿಲು ಬಿದ್ದಿದ್ದು, ಭೂತಾಯಿ ಮಡಿಲಿಗೆ ಹಾಕಿದ ಬೆಳೆಗಳು ಮಳೆ ಅರಸುತ್ತಿವೆ.
ಈ ಹಿನ್ನೆಲೆಯಲ್ಲಿ ಕುಂದಗೋಳ ತಾಲೂಕಿನ ಕಡಪಟ್ಟಿಯಲ್ಲಿ ಇಂದಿನಿಂದ ಮಳೆಗಾಗಿ ಭಜನಾ ಸಪ್ತಾಹ ಆರಂಭವಾಗಿದೆ.
ಕಡಪಟ್ಟಿ ಗ್ರಾಮದ ಬಸವೇಶ್ವರನಿಗೆ ರೈತಾಪಿ ಮಹಿಳೆಯರು, ವೃದ್ಧರು, ನಿರಂತರ ದಿನದ 24 ಗಂಟೆ ಐದು ದಿನಗಳ ಕಾಲ ಶಿವಾಯ ನಮಃ ಓಂ ಎಂಬ ಭಜನಾ ಸಪ್ತಾಹ ಕೈಗೊಂಡು ಕೆರೆ ತಟದಲ್ಲಿ ಮಣ್ಣಿನ ಈಶ್ವರಮೂರ್ತಿ ಸ್ಥಾಪಿಸಿ ಪೂಜೆ ಜಲಾಭಿಷೇಕ ಮಾಡಿದ್ದಾರೆ.
ಈ ಹಿಂದೆ ರೈತಾಪಿ ಬದುಕಿಗೆ ಅನಾವೃಷ್ಟಿ ಉಂಟಾದಾಗ ಇದೇ ರೀತಿ ಭಜನಾ ಸಪ್ತಾಹ ಕೈಗೊಂಡು ಹಲವಾರು ವರ್ಷ ಮಳೆ ಸುರಿದಿದ್ದು ಕಡಪಟ್ಟಿ ಬಸವಣ್ಣನ ಪವಾಡಕ್ಕೆ ಸಾಕ್ಷಿಯಾಗಿದೆ.
ಈ ವರ್ಷವೂ ಸಹ ರೈತಾಪಿ ಮಹಿಳೆಯರು ಮಳೆಗಾಗಿ ಭಜನಾ ಸಪ್ತಾಹದ ಜೊತೆ ಈಶ್ವರಲಿಂಗಕ್ಕೆ ಜಲಾಭಿಷೇಕ ಕೈಗೊಂಡು ಆಕಾಶದತ್ತ ದೃಷ್ಟಿ ನೆಟ್ಟಿದ್ದಾರೆ.
ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ
Kshetra Samachara
20/06/2022 05:10 pm