ಪಬ್ಲಿಕ್ ನೆಕ್ಸ್ಟ್ ವಿಶೇಷ: ಪ್ರವೀಣ ಓಂಕಾರಿ
ಧಾರವಾಡ: ಆ ಗ್ರಾಮದಲ್ಲಿ ಗ್ರಾಮ ದೇವತೆಯರನ್ನು ಪೂಜಿಸುತ್ತಿದ್ದರೂ ಆ ದೇವತೆಯರ ಜಾತ್ರೆ ಮಾಡದೇ ಶತಮಾನವೇ ಕಳೆದಿದ್ದವು. ಎರಡು ವರ್ಷಗಳ ಹಿಂದೆ ಜಾತ್ರೆ ಮಾಡಬೇಕೆಂದುಕೊಂಡಾಗ ಕೊರೊನಾ ಹಾವಳಿಯಿಂದ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ ಇದೀಗ ಕೊರೊನಾ ಹಾವಳಿಯೂ ಮುಗಿದು, ಜನರು ಕೃಷಿ ಚಟುವಟಿಕೆ ಮುಗಿಸಿ, ನೆಮ್ಮದಿಯಾಗಿದ್ದಾರೆ. ಇಂತಹ ಸಂದರ್ಭದಲ್ಲಿ ನೂರು ವರ್ಷಗಳ ಹಿಂದೆ ನಡೆಯುತ್ತಿದ್ದ ಜಾತ್ರೆಯನ್ನು ಮಾಡಲು ನಿರ್ಧರಿಸಿ, ಇದೀಗ ಒಟ್ಟು 11 ದಿನಗಳ ಕಾಲ ಜಾತ್ರೆ ಮಾಡುತ್ತಿದ್ದಾರೆ. ಆದರೆ ಈ ಜಾತ್ರೆಯಲ್ಲಿ ನಡೆಯೋ ಆಚರಣೆಗಳೇ ವಿಚಿತ್ರ. ಧಾರವಾಡದಲ್ಲಿ ನಡೆದಿರೋ ಇಂತದ್ದೊಂದು ಜಾತ್ರೆಯ ವರದಿ ಇಲ್ಲಿದೆ.
ಗ್ರಾಮದ ಗಲ್ಲಿ ಗಲ್ಲಿಗಳಲ್ಲಿ ಓಲಾಡುತ್ತಾ ಸಾಗುತ್ತಿರೋ ದೇವತಿಯರ ವಿಗ್ರಹಗಳು.. ಗಲ್ಲಿಗಲ್ಲಿಯಲ್ಲಿ ದೇವಿ ನುಗ್ಗುತ್ತಲೇ ಕೇಕೆ ಹಾಕಿ ಭಂಡಾರ ಎರಚುತ್ತಿರೋ ಭಕ್ತರು.. ದೇವಿಯರಿಗೆ ಜೈಕಾರ ಹಾಕುತ್ತಾ ಸಾಗುತ್ತಿರೋ ಮಹಿಳೆಯರು.. ಗ್ರಾಮದ ತುಂಬೆಲ್ಲಾ ಹಳದಿ ಬಣ್ಣದ ಭಂಡಾರದ್ದೇ ರಂಗು. ಇದೆಲ್ಲ ನಡೆದಿರೋದು ಧಾರವಾಡ ತಾಲೂಕಿನ ಕಲಿಕೇರಿ ಗ್ರಾಮದಲ್ಲಿ. ಹೌದು! ಗ್ರಾಮ ದೇವತೆಯರಾದ ದ್ಯಾಮವ್ವ ಮತ್ತು ದುರಗವ್ವನ ಜಾತ್ರೆಯ ಅಂಗವಾಗಿ ಇಂತದ್ದೊಂದು ಸಡಗರ, ಸಂಭ್ರಮ ಈ ಕಲಕೇರಿ ಗ್ರಾಮದಲ್ಲಿ ಮನೆ ಮಾಡಿದೆ. ಈ ದೇವಿಯರ ಜಾತ್ರೆಯನ್ನು ಗ್ರಾಮದಲ್ಲಿ ನೂರು ವರ್ಷಗಳ ಹಿಂದೆ ಮಾಡಲಾಗಿತ್ತಂತೆ. ಯಾವುದೋ ಕಾರಣಕ್ಕೆ ಜಾತ್ರೆ ನಿಂತೇ ಹೋಗಿತ್ತಂತೆ. ಹೀಗೆ ನೂರು ವರ್ಷದ ಹಿಂದೆ ನಿಂತು ಹೋಗಿದ್ದ ಜಾತ್ರೆಯನ್ನು ಈ ಬಾರಿ ಮಾಡಲು ಗ್ರಾಮದವರೆಲ್ಲಾ ನಿರ್ಧರಿಸಿ, ಮಂಗಳವಾರದಿಂದ ಒಟ್ಟು 11 ದಿನಗಳ ಕಾಲ ಜಾತ್ರೆಯನ್ನು ಮಾಡುತ್ತಿದ್ದಾರೆ. ಇಬ್ಬರೂ ದೇವತೆಗಳ ವಿಗ್ರಹಗಳನ್ನು ಗ್ರಾಮಸ್ಥರು ಹೊತ್ತೊಯ್ಯುತ್ತಾರೆ. ಆದರೆ, ಹೀಗೆ ಹೊತ್ತೊಯ್ಯೋ ಜನರ ಕೈಯಲ್ಲಿ ಏನೂ ಇರೋದಿಲ್ಲವಂತೆ. ದೇವಿ ಎತ್ತ ಕಡೆ ಸಾಗುವಂತೆ ಪ್ರೇರೇಪಣೆ ನೀಡುತ್ತಾಳೋ ಅತ್ತ ಕಡೆ ವಿಗ್ರಹ ಸಾಗುತ್ತದಂತೆ. ಹೀಗೆ ಗ್ರಾಮದ ತುಂಬೆಲ್ಲಾ ಓಲಾಡುತ್ತಾ ಸಾಗುವ ದೇವಿಯ ಸುತ್ತಮುತ್ತ ಭಂಡಾರದ ಓಕುಳಿಯ ಸಂಭ್ರಮ.
ಜಾತ್ರೆ ಮಾಡುವ ಸಲುವಾಗಿ ಗ್ರಾಮದಲ್ಲಿ ಮೊದಲಿಗೆ ಸಭೆ ನಡೆಸಲಾಯಿತು. ಗ್ರಾಮಸ್ಥರೆಲ್ಲಾ ಸೇರಿ ಜಾತ್ರೆಗೆ ತಗಲೋ ಖರ್ಚನ್ನು ಹಂಚಿಕೊಳ್ಳಲು ನಿರ್ಧರಿಸಿದರು. ಇನ್ನು ಮುಖ್ಯವಾಗಿ ಜಾತ್ರೆಗೆ ಬೇಕಾಗಿದ್ದು ಭಂಡಾರ. ಬೆಳಗಾವಿ ಜಿಲ್ಲೆಯ ಗೋಕಾಕನಿಂದ ಹತ್ತು ಟನ್ ಭಂಡಾರವನ್ನು ತರಲಾಗಿದೆ. ಮೊದಲ ಐದು ದಿನಗಳ ಕಾಲ ಭಂಡಾರದಿಂದ ಹೊನ್ನಾಟವನ್ನು ಆಡಲಾಗುತ್ತೆ. ಇನ್ನು ಈ ಜಾತ್ರೆಯ ದಿನಗಳಲ್ಲಿ ಗ್ರಾಮದಲ್ಲಿ ಯಾರೊಬ್ಬರೂ ಚಪ್ಪಲಿ ಧರಿಸುವಂತಿಲ್ಲ. ಹೊರಗಡೆಯಿಂದ ಬಂದವರು ಕೂಡ ಗ್ರಾಮದ ಹೊರಭಾಗದಲ್ಲಿಯೇ ಚಪ್ಪಲಿ ಕಳಚಿ ಗ್ರಾಮ ಪ್ರವೇಶಿಸಬೇಕು. ಇದರೊಂದಿಗೆ ಬಲು ಮುಖ್ಯವಾಗಿದ್ದು, ಗ್ರಾಮದಲ್ಲಿ ಯಾರ ಮನೆಯಲ್ಲಿಯೂ ಅಡುಗೆಯನ್ನು ಕೂಡ ಮಾಡುವಂತಿಲ್ಲ. ಎಲ್ಲರಿಗೂ ಜಾತ್ರಾ ಮಂಡಳಿಯೇ ಊಟದ ವ್ಯವಸ್ಥೆ ಮಾಡಿದೆ. ಹೀಗಾಗಿ ಈ ಹನ್ನೊಂದು ದಿನಗಳ ಕಾಲ ಎಲ್ಲರೂ ಜಾತ್ರಾ ಮಂಡಳಿ ವ್ಯವಸ್ಥೆ ಮಾಡಿರೋ ಕಡೆಗೆ ಬಂದು ಊಟ ಮಾಡಿ ಹೋಗಬೇಕು. ನೂರು ವರ್ಷಗಳ ಬಳಿಕ ಗ್ರಾಮ ದೇವತೆಯರ ಜಾತ್ರೆ ಮಾಡುತ್ತಿರೋದ್ರಿಂದ ಜನರಲ್ಲಿ ಸಂತಸ ಮನೆ ಮಾಡಿದೆ.
ಇನ್ನು ದೇವರ ಜಾಗೆಯನ್ನು ಕಬಳಿಸಲಾಗಿದೆ ಅಂತಾ ಕೆಲ ಮನೆಗಳಿಗೆ ನುಗ್ಗಿದ ದೇವತೆಯರ ವಿಗ್ರಹಗಳು ಅಚ್ಚರಿಗೆ ಕಾರಣವಾದವು. ಮನೆಯ ಮಾಲಿಕರು ಏನೇ ಗೋಗರೆದರೂ ದೇವತಿಯ ಆದೇಶದಂತೆ ಮನೆಯನ್ನು ತೆರವುಗೊಳಿಸಲು ಗ್ರಾಮಸ್ಥರು ನಿರ್ಧರಿಸಿದರು. ಇದು ಕೆಲ ಕಾಲ ಗೊಂದಲದ ವಾತಾವರಣಕ್ಕೆ ಕಾರಣವಾಯಿತು. ದೇವತೆ ಹೇಳಿದ್ದಾಳೆಂದ ಮೇಲೆ ಮನೆಯನ್ನು ತೆರವುಗೊಳಿಸುವಂತೆ ಮಾಲಿಕರಿಗೆ ಗ್ರಾಮಸ್ಥರು ಸೂಚನೆ ನೀಡಿದರು. ಒಟ್ಟಿನಲ್ಲಿ ನೂರು ವರ್ಷಗಳ ಬಳಿಕ ನಡೆಯೋ ಜಾತ್ರೆಯಿಂದಾಗಿ ಹನ್ನೊಂದು ದಿನಗಳ ಕಾಲ, ಗ್ರಾಮದಲ್ಲಿ ಮರೆತೇ ಹೋಗಿದ್ದ ಸಂಪ್ರದಾಯ ಮರಳಿ ಸೃಷ್ಠಿಯಾಗಿದ್ದಂತೂ ಸತ್ಯ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
21/04/2022 09:27 pm