ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚನ್ನಮ್ಮನ ಕಿತ್ತೂರು:ಒಂದೇ ದಿನಕ್ಕೆ ಸೀಮಿತವಾದ ಕಿತ್ತೂರು ಉತ್ಸವ

ಚನ್ನಮ್ಮನ ಕಿತ್ತೂರು: ಸ್ವಾತಂತ್ರ್ಯ ಹೋರಾಟದ ಬೆಳ್ಳಿಚುಕ್ಕಿ ವೀರರಾಣಿ ಕಿತ್ತೂರು ಚನ್ನಮ್ಮಳ ಜಯಂತಿಯನ್ನು ಆಕೆಯ ನಾಡಿನಲ್ಲಿ ಶುಕ್ರವಾರ ಸರಳವಾಗಿ ಆಚರಣೆ ಮಾಡಲಾಯಿತು.

ಪ್ರತಿವರ್ಷ ಅ.23 ರಿಂದ ಮೂರು ದಿನಗಳ ಕಾಲ ನಡೆಯುತ್ತಿದ್ದ ಕಿತ್ತೂರು ಉತ್ಸವಕ್ಕೆ ಕೊರೊನಾ ಬ್ರೇಕ್ ಹಾಕಿ, ಈ ವರ್ಷ ಉತ್ಸವ ಒಂದೇ ದಿನಕ್ಕೆ ಸೀಮಿತವಾಗುವಂತೆ ಮಾಡಿತು.

ವಿಜಯದ ದ್ಯೋತಕವಾಗಿರುವ ವೀರಜ್ಯೋತಿಯನ್ನು ಅದ್ಧೂರಿಯಾಗಿ ಸ್ವಾಗತಿಸುವ ಮೂಲಕ ಕಿತ್ತೂರು ಉತ್ಸವ-2020ಕ್ಕೆ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಹಾಗೂ ಶಾಸಕ ಮಾಹಾಂತೇಶ ದೊಡ್ಡಗೌಡರ ಚಾಲನೆ ನೀಡಿದರು.

ಈ ವೇಳೆ ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ, ಜ್ಯೋತಿ ಹೊತ್ತುಬಂದ ವಾಹನಕ್ಕೆ ಪೂಜೆ ಸಲ್ಲಿಸಿ ಜ್ಯೋತಿಯನ್ನು ಸ್ವಾಗತಿಸಿದರು. ಇದಾದ ಬಳಿಕ ಬೈಲೂರಿನ ನಿಷ್ಕಲಮಂಟಪದ ನಿಜಗುಣಾನಂದ ಸ್ವಾಮೀಜಿ, ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಹಾಗೂ ನಿಚ್ಚಣಿಕೆಯ ಗುರು ಮಡಿವಾಳೇಶ್ವರ ಮಠದ ಪಂಚಾಕ್ಷರಿ ಮಠದ ಸ್ವಾಮೀಜಿ ಧ್ವಜಾರೋಹಣ ನೆರವೇರಿಸಿದರು. ಚನ್ನಮ್ಮ ವೃತ್ತದಲ್ಲಿರುವ ಕಿತ್ತೂರು ಚನ್ನಮ್ಮ ಪುತ್ಥಳಿ, ಕ್ರಾಂತೀವೀರ ಸಂಗೊಳ್ಳಿ ರಾಯಣ್ಣ ಮೂರ್ತಿ, ಅಮಟೂರ ಬಾಳಪ್ಪನವರ ಮೂರ್ತಿಗೆ ಸ್ವಾಮೀಜಿಗಳು, ಗಣ್ಯರು ಹಾಗೂ ಜನಪ್ರತಿನಿಧಿಗಳು ಮಾಲಾರ್ಪಣೆ ಮಾಡಿದರು.

ಚನ್ನಮ್ಮ ವೃತ್ತದಿಂದ ಆರಂಭಗೊಂಡ ವೀರಜ್ಯೋತಿಯ ಮೆರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತ ನಿಚ್ಚಣಿಕಿ ಮಡಿವಾಳೇಶ್ವರ ಮಠದವರೆಗೆ ತೆರಳಿ ಸಂಪನ್ನವಾಯಿತು. ಪ್ರತಿ ವರ್ಷ ಮೂರು‌ ದಿನಗಳ ಕಾಲ ಅತ್ಯಂತ ವಿಜೃಂಭಣೆಯಿಂದ ಕಿತ್ತೂರು ಉತ್ಸವ ಆಚರಿಸಲಾಗುತ್ತಿತ್ತು. ಕೊರೊನಾ ಕಾರಣಕ್ಕೆ ಈ ಬಾರಿ ಕುಸ್ತಿಹಬ್ಬ, ಕ್ರೀಡಾ ಸ್ಪರ್ಧೆಗಳು, ವಿಚಾರ ಸಂಕಿರಣ ಹಾಗೂ ಯಾವುದೇ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರಲಿಲ್ಲ.

Edited By : Manjunath H D
Kshetra Samachara

Kshetra Samachara

23/10/2020 10:51 pm

Cinque Terre

24.76 K

Cinque Terre

0

ಸಂಬಂಧಿತ ಸುದ್ದಿ