ಧಾರವಾಡ: ಪುಟ್ಟ ಪುಟ್ಟ ಹೆಜ್ಜೆ ಇಡುತ್ತ ಓಡೋಡಿ ಬರುತ್ತಿರೋ ಪುಟಾಣಿ ಕೃಷ್ಣ-ರಾಧೆಯರ ಸಮೂಹ ಒಂದು ಕಡೆ. ಇನ್ನೊಂದೆಡೆ ಕೃಷ್ಣನ ಬೆಳವಣಿಗೆಯ ವಿವಿಧ ಹಂತದ ದರ್ಶನ. ಅದೆಲ್ಲವನ್ನೂ ನೋಡೋದಕ್ಕೆ ಮುಗಿಬಿದ್ದಿರೋ ಜನ ಸಮೂಹ. ಇದೆಲ್ಲವೂ ಕಂಡು ಬಂದಿದ್ದು, ಧಾರವಾಡದ ಮೃತ್ಯುಂಜಯ ನಗರದಲ್ಲಿರೋ ಜೆಎಸ್ಎಸ್ ಸಂಸ್ಥೆಯ ಶ್ರೀ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ.
ಕಳೆದ ಎರಡು ವರ್ಷಗಳಿಂದ ಕೊರೊನಾ ಕಾರಣಕ್ಕೆ ಯಾವುದೇ ಪಠ್ಯೇತರ ಚಟುವಟಿಕೆಗಳೇ ನಡೆದಿರಲಿಲ್ಲ. ಇದರಿಂದಾಗಿ ಮಕ್ಕಳ ಓದಿಗೆ ಉತ್ತೇಜನ ನೀಡಬೇಕು ಎಂದುಕೊಂಡು ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಈ ರೀತಿಯಲ್ಲಿ ಅದ್ಬುತ್ ಸೆಟ್ಗಳ ಮೂಲಕ ಪ್ರಸ್ತುತಪಡಿಸಲಾಯಿತು. ಅದರಲ್ಲಿಯೂ ಶ್ರೀಕೃಷ್ಣ ಅಂದಾಕ್ಷಣ ಆತನ ಜೀವನ ಶುರುವಾಗೋದೇ ಕಾರಾಗೃಹದಿಂದ. ಹೀಗಾಗಿ ಇಲ್ಲಿ ಕಾರಾಗೃಹದ ಸೆಟ್ ಹಾಕಿ ಅಲ್ಲಿ ವಾಸುದೇವ ಮತ್ತು ದೇವಕಿ ದಂಪತಿಗೆ ಕಾರಾಗೃಹದಲ್ಲಿ ಶ್ರೀ ಕೃಷ್ಣ ಜನಿಸುವ ಪ್ರಸಂಗದಿಂದ ಈ ಪ್ರದರ್ಶನ ಆರಂಭಗೊಂಡು ನಂತರ ವಾಸುದೇವ ತಲೆಯ ಮೇಲೆ ಕೃಷ್ಣನನ್ನು ಬುಟ್ಟಿಯಲ್ಲಿ ಹಾಕಿಕೊಂಡು ಯಮುನಾ ನದಿ ದಾಟುವ ದೃಶ್ಯ. ಬಳಿಕ ಯಶೋಧಾಳ ಆಶ್ರಯಕ್ಕೆ ಕೃಷ್ಣ ಸೇರಿದಾಗ, ಅಲ್ಲಿ ಯೋಶಾಧಮಯ್ಯಾ ಮಜ್ಜಗಿ ಕಡಿದು ಬೆಣ್ಣೆ ತೆಗೆಯುವ ದೃಶ್ಯ ಹೀಗೆ ಒಂದೊಂದೇ ದೃಶ್ಯಗಳನ್ನು ಕಲಾತ್ಮಕ ಸೆಟ್ ಹಿನ್ನೆಲೆಯಲ್ಲಿ ಮಕ್ಕಳೇ ಪ್ರಸ್ತುತಪಡಿಸಿದರು.
ಇನ್ನು ಶ್ರೀಕೃಷ್ಣ ಅಂದ್ರೆ ಅಲ್ಲಿ ರಾಧೆಯೊಂದಗಿನ ಸರಸ, ಗೋಪಿಕೆಯರೊಂದಿಗಿನ ಕೋಲಾಟದ ನೃತ್ಯ ಇರಲೇಬೇಕಲ್ವಾ. ಅದನ್ನೂ ಸಹ ಇಲ್ಲಿ ಪುಟ್ಟ ಪುಟ್ಟ ರಾಧಾ ಕೃಷ್ಣ ಜೋಡಿಗಳು ತೋರಿಸಿಕೊಟ್ಟವು. ಇನ್ನು ಕೃಷ್ಣ ಲೀಲೆ ಮತ್ತು ಪವಾಡಗಳಿಗೂ ಹೆಸರುವಾಸಿ. ಹೀಗಾಗಿ ಕೃಷ್ಣ ಬಾಲ್ಯದಲ್ಲೇ ನಡೆಸಿದ ಕಾಳಿಂಗ ಮರ್ದನ, ಬಕಾಸುರ ವಧೆ, ಪುತನಿ ಸಂಹಾರ, ಕಂಸನ ವಧೆಯನ್ನು ಪ್ರತ್ಯೇಕವಾಗಿ ಮಕ್ಕಳೇ ಆಯಾ ವೇಷಭೂಷಣಗಳಲ್ಲಿ ತೋರಿಸಿಕೊಟ್ಟರು. ಎಲ್ಲಕ್ಕಿಂತ ಮುಖ್ಯವಾಗಿ ಕೃಷ್ಣನ ದಶಾವತರ ಹಾಗೂ ಅರ್ಜುನನಿಗೆ ಕುರುಕ್ಷೇತ್ರದಲ್ಲಿ ಗೀತೋಪದೇಶ ಮಾಡುವ ಸನ್ನಿವೇಶಗಳಂತೂ ಮಕ್ಕಳು ಅತ್ಯದ್ಭುತವಾಗಿ ಕಟ್ಟಿಕೊಟ್ಟರು. ಇನ್ನು ಈ ಇಡೀ ದೃಶ್ಯವನ್ನು ನೋಡೋದಕ್ಕೆ ಪಾಲಕರು ಮಾತ್ರವಲ್ಲದೇ ಸಾರ್ವಜನಿಕರಿಗೂ ಮುಕ್ತ ಅವಕಾಶ ನೀಡಲಾಗಿತ್ತು. ಹೀಗಾಗಿ ಇಡೀ ಶಾಲೆಯ ಕ್ಯಾಂಪಸ್ ಕೃಷ್ಣನ ಲೋಕವಾಗಿಯೇ ಪರಿವರ್ತನೆ ಹೊಂದಿದ್ದು, ಸಾರ್ವಜನಿಕರು ಸರತಿ ಸಾಲಿನಲ್ಲಿ ನಿಂತು ಈ ದೃಶ್ಯಗಳನ್ನು ಕಣ್ತುಂಬಿಕೊಂಡು, ತಮ್ಮ ಮೊಬೈಲ್ಗಳಲ್ಲಿ ದೃಶ್ಯಗಳನ್ನು ಸೆರೆ ಹಿಡಿದರು. ಇದೆನ್ನೆಲ್ಲ ನೋಡಿದ ಮಕ್ಕಳ ಖುಷಿಗಂತೂ ಪಾರವೇ ಇರಲಿಲ್ಲ.
ಇಡೀ ಕಾರ್ಯಕ್ರಮವನ್ನು ನರ್ಸರಿಯಿಂದ ಹಿಡಿದು, ಎಸ್ಎಸ್ಎಲ್ಸಿವರೆಗಿನ ಮಕ್ಕಳೇ ನಡೆಸಿಕೊಟ್ಟಿದ್ದು, ಈ ಕಾರ್ಯಕ್ರಮದ ಮತ್ತೊಂದು ವಿಶೇಷವಾಗಿತ್ತು.
Kshetra Samachara
18/08/2022 04:21 pm