ಧಾರವಾಡ: ವಿಭಿನ್ನ ಜ್ಞಾನಾರ್ಜನೆಗೆ ಪೂರಕವಾದ ಹೊಸ ಪುಸ್ತಕಗಳನ್ನು ಕೊಂಡು ಓದುವ ಮೂಲಕ ಶಿಕ್ಷಕರು ನಿತ್ಯವೂ ಹೊಸ ಓದಿಗೆ ತೆರೆದುಕೊಳ್ಳಬೇಕು ಎಂದು ಧಾರವಾಡ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಓ) ಉಮೇಶ ಬೊಮ್ಮಕ್ಕನವರ ಹೇಳಿದರು.
ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮದ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಶಿಕ್ಷಣ ಇಲಾಖೆಯ ಗ್ರಾಮೀಣ ಬಿಇಓ ಕಚೇರಿ, ಗ್ರಾಮೀಣ ಕ್ಷೇತ್ರ ಸಂಪನ್ಮೂಲ ಕೇಂದ್ರ, ಅಮ್ಮಿನಬಾವಿ ಗ್ರಾಮ ಪಂಚಾಯತಿ ಹಾಗೂ ಅಮ್ಮಿನಬಾವಿ ಸಮೂಹ ಸಂಪನ್ಮೂಲ ಕೇಂದ್ರದ ಜಂಟಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಅಮ್ಮಿನಬಾವಿ ಕ್ಲಸ್ಟರ್ ಮಟ್ಟದ ‘ಪುಸ್ತಕ ಜೋಳಿಗೆ ಅಭಿಯಾನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾನು ವಿವಿಧ ಗ್ರಾಮ ಪಂಚಾಯ್ತಿಗಳ ಆಡಳಿತಾಧಿಕಾರಿಯಾಗಿದ್ದಾಗ ವಾಚನಾಲಯ ಅಭಿವೃದ್ಧಿಗೆ ಪೂರಕವಾದ ‘ಓದು ಬೆಳಕು’ ಕಾರ್ಯಕ್ರಮದ ಸಬಲೀಕರಣ ವಿಚಾರದಲ್ಲಿ ಈ ‘ಪುಸ್ತಕ ಜೋಳಿಗೆ’ಯ ಪರಿಕಲ್ಪನೆ ಅಂಕುರಿಸಿತು. ಪ್ರಸ್ತುತ ತಾಲೂಕಿನಲ್ಲಿ ಉತ್ತಮ ಪ್ರತಿಕ್ರಿಯೆ ಬಂದಿದ್ದು, ಈ ತನಕ 8 ಸಾವಿರ ಪುಸ್ತಕಗಳನ್ನು ಸಂಗ್ರಹಿಸಲಾಗಿದೆ ಎಂದು ಬೊಮ್ಮಕ್ಕನವರ ತಿಳಿಸಿದರು.
ಪುಸ್ತಕ ಜೋಳಿಗೆ ಅಭಿಯಾನ ಉದ್ಘಾಟಿಸಿದ ತಾಲೂಕು ಪಂಚಾಯ್ತಿ ಸದಸ್ಯ ಸುರೇಂದ್ರ ದೇಸಾಯಿ ಮಾತನಾಡಿ, ಪುಸ್ತಕ ಜೋಳಿಗೆ ಅಭಿಯಾನಕ್ಕೆ ಪೂರಕವಾಗಿ ಅಮ್ಮಿನಬಾವಿ ಗ್ರಾಮ ಪಂಚಾಯ್ತಿ ಕೇಂದ್ರ ಸ್ಥಾನದ ಸರಕಾರಿ ಗ್ರಂಥಾಲಯವನ್ನು ಎಲ್ಲ ನೆಲೆಗಳಲ್ಲಿ ಅಭಿವೃದ್ಧಿಪಡಿಸಿ ವಿಶೇಷವಾಗಿ ವಿದ್ಯಾರ್ಥಿಗಳು ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಅತಿಹೆಚ್ಚು ಸಂಖ್ಯೆಯಲ್ಲಿ ವಾಚನಾಲಯಕ್ಕೆ ಬರುವಂತೆ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.
ಜೀವನ ಶಿಕ್ಷಣ ಮಾಸಪತ್ರಿಕೆಯ ಜಂಟಿ ಸಂಪಾದಕ ಡಾ.ಗುರುಮೂರ್ತಿ ಯರಗಂಬಳಿಮಠ, ಪಿಡಿಓ ಸುರೇಶ ಸಿಂಗನಳ್ಳಿ, ಕಾರ್ಯದರ್ಶಿ ಮಹಾಂತೇಶ ಮುಂಡಾಸ, ಶಾಂತೇಶ್ವರ ಪ್ರೌಢ ಶಾಲೆಯ ಮುಖ್ಯಾಧ್ಯಾಪಕ ಮೃತ್ಯುಂಜಯ ಅಂಗಡಿ, ಸಿಆರ್‌ಪಿ ಬಸವರಾಜ ಕುರುಗುಂದ ಮತ್ತಿತರರು ಇದ್ದರು.
Kshetra Samachara
17/01/2021 10:27 am