ಧಾರವಾಡ: ಪ್ರತಿವರ್ಷ ಯುಗಾದಿ ಅಮವಾಸ್ಯೆಯಂದು ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮಕ್ಕೆ ಹೊಂದಿಕೊಂಡ ಹನುಮನಕೊಪ್ಪ ಗ್ರಾಮದ ರೈತರು ವಿಶಿಷ್ಟ ಆಚರಣೆಯೊಂದನ್ನು ಮಾಡ್ತಾರೆ. ಈ ಆಚರಣೆ ರಾಜ್ಯ ರಾಜಕಾರಣದ ಭವಿಷ್ಯವನ್ನು ನಿರ್ಧಾರ ಮಾಡುತ್ತದೆ. ಅಲ್ಲದೇ ಬರುವ ದಿನಗಳಲ್ಲಿ ಮಳೆ ಹೇಗಿದೆ ಹಾಗೂ ಬೆಳೆಗೆ ಸರಿಯಾದ ಬೆಲೆ ಯಾವಾಗ ಸಿಗುತ್ತದೆ ಎಂಬುದನ್ನು ನಿರ್ಧಾರ ಮಾಡುತ್ತದೆ ಎಂಬುದು ಈ ಗ್ರಾಮಸ್ಥರ ಅಭಿಪ್ರಾಯ.
ಹೌದು! ನೀವು ದೃಶ್ಯಗಳಲ್ಲಿ ನೋಡುತ್ತಿರುವ ಮಣ್ಣಿನ ಆಕೃತಿಯ ಈ ವಿಧಾನಕ್ಕೆ ಫಲ ಹಾಕೋದು ಎನ್ನುತ್ತಾರೆ. ಶುಕ್ರವಾರ ಯುಗಾದಿ ಅಮವಾಸ್ಯೆಯಾಗಿದ್ದರಿಂದ ಸಂಜೆ ಹಳ್ಳದ ದಂಡೆಯ ಮೇಲೆ ಈ ರೀತಿಯ ಆಕೃತಿ ಮಾಡಿಡಲಾಗಿದೆ. ಈ ಆಕೃತಿಯ ನಾಲ್ಕೂ ದಿಕ್ಕಿನಲ್ಲಿ ಮನುಷ್ಯನ ಆಕೃತಿಯನ್ನು ಮಣ್ಣಿನಿಂದ ಮಾಡಿಡಲಾಗಿದೆ. ಅಲ್ಲದೇ ನಾಲ್ಕೂ ಮೂಲೆಗೆ ಅನ್ನದ ಉಂಡೆಗಳನ್ನು ಇಡಲಾಗಿದೆ. ಜೊತೆಗೆ ಎತ್ತುಗಳ ಆಕೃತಿ, ಗಣಪತಿ, ಶಿವ, ಪಾರ್ವತಿಯರ ಮೂರ್ತಿಯನ್ನೂ ಮಾಡಿಡಲಾಗಿದೆ. ಅದರ ಮುಂದೆ ಎಲ್ಲಾ ಮಳೆಯ ಹೆಸರಿನಲ್ಲಿ ಯಕ್ಕಿಯ ಎಲೆಗಳನ್ನು ಇಡಲಾಗಿದ್ದು, ಹಿಂಗಾರು, ಮುಂಗಾರು ಬೆಳೆಗಳಾದ ಹೆಸರು, ಉದ್ದು, ಶೇಂಗಾ, ಕಡಲೆ, ಜೋಳಗಳನ್ನು ಯಕ್ಕಿಯ ಎಲೆಗಳಲ್ಲಿ ಮುಚ್ಚಿಡಲಾಯಿತು. ಸಂಜೆ ಇಷ್ಟೆಲ್ಲ ಮಾಡಿ ಇಡಲಾಗಿದ್ದು, ನಾಳೆ ಬೆಳಿಗ್ಗೆ ಗ್ರಾಮಸ್ಥರು ಅದನ್ನು ಹೋಗಿ ನೋಡಿ ಅದರ ಮೇಲೆ ಮಳೆ, ಬೆಳೆಗಳಿಗೆ ಬೆಲೆ, ರಾಜಕೀಯ ಭವಿಷ್ಯವನ್ನು ಬಿಚ್ಚಿಡಲಿದ್ದಾರೆ. ನಾಳೆ ಯಾವೆಲ್ಲ ಭವಿಷ್ಯ ಹೊರಬೀಳಲಿದೆ ಎಂಬುದನ್ನು ಕಾದು ನೋಡಬೇಕಿದೆ.
Kshetra Samachara
01/04/2022 09:02 pm