ಧಾರವಾಡ : ಹಿಂದೂಗಳು ಪೂಜಿಸುವ ಗಣಪತಿ, ಶಿವ, ಪಾರ್ವತಿ ಹಾಗೂ ಅಯ್ಯಪ್ಪನ ಬಗ್ಗೆ ಹೋರಾಟಗಾರ್ತಿ ಬಿ.ಟಿ.ಲಲಿತಾ ಅವರು ಲೇವಡಿ ಮಾಡಿದ ಪ್ರಸಂಗ ನಡೆದಿದೆ.
ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ಗಣೇಶ ಅನ್ನೋದು ಒಂದು ಜ್ಞಾನ. ಆ ಜ್ಞಾನಕ್ಕೆ ಒಂದು ಆಕಾರ ಕೊಟ್ಟಿದ್ದಾರೆ. ಅದಕ್ಕೆ ಒಂದು ಸೊಂಡಿಲು, ತಲೆ ಇದೆ. ಈಶ್ವರ ಎನ್ನುವಂತವನು ಅಪ್ಪ ಇದ್ದಾನೆ. ದೇವರಾದವನು ಯಾರನ್ನಾದರೂ ಕೊಲ್ಲುತ್ತಾನಾ? ಧರೆಯಿಂದ ಆಕಾಶದೆತ್ತರಕ್ಕೆ ಬೆಳೆದವನು ದೇವರು. ಅಣುರೇನು ತೃನಕಾಷ್ಠದಲ್ಲಿಯೂ ದೇವರಿದ್ದಾನೆ ಎನ್ನುತ್ತಾರೆ. ಹಾಗಾದ್ರೆ ಪಾರ್ವತಿಯ ಬಚ್ಚಲು ಮನೆಯಲ್ಲಿ ದೇವರು ಇರೋದಿಲ್ವಾ? ಎಂದು ಪ್ರಶ್ನಿಸಿದ್ದಾರೆ.
ಹುಡುಗ ಅಡ್ಡ ನಿಂತಿದ್ದಾನೆ ಎಂದ ಮಾತ್ರಕ್ಕೆ ಆತನನ್ನು ಕೊಂದು ಹೋಗುವವನಿಗೆ ದೇವರು ಎನ್ನುವುದು ಹೇಗೆ?ಅವರೆಲ್ಲ ದೇವರಲ್ಲ, ಮನುಷ್ಯರು. ಆ ಮನುಷ್ಯ ಮಾಡಿರೋ ತಪ್ಪು ನಾವು ಮಾಡಬಾರದು. ಅಯ್ಯಪ್ಪ ಭಕ್ತರು ಎಂದು ಕೆಲವರು ಬಹಳ ಮಾತನಾಡುತ್ತಿರುತ್ತಾರೆ. ಆದರೆ, ಅಯ್ಯಪ್ಪ ಕಾಡಿನಲ್ಲಿ ಇಲ್ಲ. ಅಯ್ಯಪ್ಪ ಎಲ್ಲ ಕಡೆ ಅನಾಥವಾಗಿ ಇದ್ದಾನೆ. ಅನೇಕ ಅನಾಥ ಮಕ್ಕಳಿದ್ದಾರೆ. ಅವರಿಗೆ ತಂದೆ, ತಾಯಿ ಇಲ್ಲ. ಅವರನ್ನು ನೋಡಿಕೊಳ್ಳುವ ಕೆಲಸ ಆಗಬೇಕು. ಅದನ್ನು ಬಿಟ್ಟು ಕಾಡಿಗೆ ಹೋಗುವುದಲ್ಲ. ಅಲ್ಲಿ ಕಾಡು ಕಡಿದು ಪುರೋಹಿತಶಾಹಿಗೆ ಅವಕಾಶ ಕೊಟ್ಟಿದ್ದಾರೆ. ಅಲ್ಲೆಲ್ಲ ತಲೆಯ ಮೇಲೆ ಏನೇನೋ ಹೊತ್ತುಕೊಂಡು ಹೋಗುತ್ತಾರೆ. ಜಯಮಾಲಾ ಏನೋ ಮುಟ್ಟಿದ್ರಂತೆ, ಮುಟ್ಟಿದ ಕೂಡಲೇ ಮೈಲಿಗೆ ಆಯ್ತು ಎಂದರು. ಕುಳಿತಿರೋ ಮೂರ್ತಿಗೆ ಯಾರು ಮುಟ್ಟಿದರೂ ಒಂದೇ ಮುಟ್ಟದಿದ್ದರೂ ಒಂದೇ. ಸಂಕೇತಗಳು ಯಾವತ್ತೂ ಸತ್ಯವಲ್ಲ. ಸಂಕೇತಗಳು ಸಂಕೇತ ಅಷ್ಟೇ.
ದೇಶದ ಬಾವುಟವನ್ನು ನಾವು ಗೌರವಿಸುತ್ತೇವೆ. ಆದರೆ, ಆ ಬಾವುಟ ದೇಶವಲ್ಲ. ಅದು ದೇಶದ ಜನಗಳ ಪ್ರತೀಕ. ಬಾವುಟ ಹಾಕಿಕೊಂಡು ಒಂದು ವರ್ಷ ಪೂಜೆ ಮಾಡಿದರೆ ಏನಾದರೂ ಆಗುತ್ತದೆಯಾ? ಏನೂ ಆಗುವುದಿಲ್ಲ. ಈ ಪರಿಸರವೇ ದೇವರು. ನೂರು ದೇವರ ನೂಕಾಚೆ ದೂರ ಭಾರತಾಂಬೆ ದೇವಿ ಪೂಜಿಸೋಣ ಬಾರಾ ಎಂದು ಕುವೆಂಪು ಹೇಳಿದ್ದರು. ಅದು ಕೂಡ ಈಗ ತಪ್ಪಾಗಿದೆ. ಒಂದು ಕಿರೀಟ ಹಾಕಿರುವ ದೇವರು, ನಾಲ್ಕು ಕೈ ಅದಕ್ಕೆ ಪೂಜೆ ಮಾಡಿ ಕುವೆಂಪು ಮಾತು ಪಾಲಿಸುತ್ತೇವೆ ಎನ್ನುತ್ತಾರೆ ಅದು ತಪ್ಪು ಎಂದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
21/11/2024 10:39 am