ಹುಬ್ಬಳ್ಳಿ: ನಿನ್ನೆ ಹುಬ್ಬಳ್ಳಿಯಲ್ಲಿ ಆಪ್ತರಿಂದಲೇ ಕೊಲೆಯಾಗಿದ್ದ ಚಂದ್ರಶೇಖರ ಗುರೂಜಿಯವರ ಅಂತ್ಯಕ್ರಿಯೆ ಇಂದು ಹುಬ್ಬಳ್ಳಿಯಲ್ಲಿ ಅಪಾರ ಅಭಿಮಾನಿಗಳ ಸಮ್ಮುಖದಲ್ಲಿ ನೆರವೇರಿತು. ಸರಳ ವಾಸ್ತು ಮೂಲಕ ಸಾಮ್ರಾಜ್ಯ ಕಟ್ಟಿದ್ದ ಗುರೂಜಿ ಮಣ್ಣಲ್ಲಿ ಲೀನವಾದರು.
ಸರಳ ವಾಸ್ತು ಮೂಲಕ ನಾಡಿನಾದ್ಯಂತ ಮನೆ ಮಾತಾಗಿದ್ದ ಚಂದ್ರಶೇಖರ ಗುರೂಜಿ ಅಂತ್ಯಕ್ರಿಯೆ ಇಂದು ವೀರಶೈವ ಲಿಂಗಾಯತ ಧರ್ಮದ ವಿಧಿ ವಿಧಾನಗಳನ್ವಯ ನೆರವೇರಿತು. ನಿನ್ನೇ ಹುಬ್ಬಳ್ಳಿಯ ಪ್ರೆಸಿಡೆಂಟ ಹೋಟೆಲ್ ನಲ್ಲಿ ತಮ್ಮ ಹಳೆಯ ಸಿಬ್ಬಂದಿಯ ಕೈಯಲ್ಲಿ ಕೊಲೆಯಾದ ಗುರೂಜಿಯ ಅಂತ್ಯಸಂಸ್ಕಾರ, ಸುಳ್ಳ ಗ್ರಾಮದ ರಸ್ತೆಯಲ್ಲಿರುವ ಅವರ ಜಮೀನಿನಲ್ಲಿ ನಡೆಯಿತು.
ಮೂಲತಃ ಸಿವಿಲ್ ಇಂಜಿನೀಯರ ಆಗಿದ್ದ ಚಂದ್ರಶೇಖರ ಗುರೂಜಿ, ಸರಳ ವಾಸ್ತುಶಾಸ್ತ್ರದಲ್ಲಿ ಹೆಸರು ಮಾಡಿದ್ದರು. ದೇಶದಾದ್ಯಂತ ಶಾಖೆಗಳನ್ನು ತೆರೆದು ಸಾವಿರ ಕೋಟಿಗೂ ಹೆಚ್ಚು ಸಂಪತ್ತನ್ನು ಹೊಂದಿದ್ದ ಗುರೂಜಿ ನಾಲ್ಕು ಸಾವಿರಕ್ಕೂ ಹೆಚ್ಚು ಜನರಿಗೆ ಕೆಲಸ ಕೊಟ್ಟಿದ್ದರು. ಗುರೂಜಿ ತಮ್ಮದೇ ಸಂಸ್ಥೆಯ ಹಳೆಯ ಸಿಬ್ಬಂದಿ ಕೈಯಲ್ಲಿ ಬರ್ಬರವಾಗಿ ಹತ್ಯೆಯಾಗಿದ್ದನ್ನು ತಿಳಿದು ಅವರ ಅಪಾರ ಸಂಖ್ಯೆಯ ಅಭಿಮಾನಿಗಳು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು. ಅದೆಷ್ಟೋ ಜನರು ಇಂತಹ ಘಟನೆ ನಡೆಯಬಾರದಿತ್ತು ಅಂತ ಮರುಗಿದ್ದಾರೆ.
ಇದಕ್ಕೂ ಮೊದಲು ಚಂದ್ರಶೇಖರ ಗುರೂಜಿಯ ಮೃತದೇಹವನ್ನು ನಿನ್ನೆಯೇ ಕಿಮ್ಸ್ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿತ್ತು. ಇಂದು ಬೆಳಿಗ್ಗೆ ಮರಣೋತ್ತರ ಪರೀಕ್ಷೆ ನಡೆದ ನಂತರ ಅವರ ಮೃತದೇಹವನ್ನು, ಗುರೂಜಿಯ ಸಹೋದರನ ಮಗ ಸಂಜಯ ಅಂಗಡಿಗೆ ಹಸ್ತಾಂತರಿಸಲಾಯಿತು. ದೂರದ ಊರುಗಳಿಂದ ಬಂದಿದ್ದ ಅವರ ಅಭಿಮಾನಿಗಳು ಗುರೂಜಿಯ ಅಂತಿಮ ದರ್ಶನ ಪಡೆದರು. ಗುರೂಜಿ ಜೊತೆಗಿನ ಸಂಬಂಧವನ್ನು ಮೆಲಕು ಹಾಕಿದರು.
ಈ ಸಂದರ್ಭದಲ್ಲಿ ಗುರೂಜಿಯ ಧರ್ಮಪತ್ನಿ ಮತ್ತು ಮಗಳನ್ನು ಸಮಾಧಾನ ಪಡಿಸಲು ಸಂಬಂಧಿಕರು ಹರಸಾಹಸಪಟ್ಟರು. ಕಿಮ್ಸ್ ಆಸ್ಪತ್ರೆಯ ಶವಾಗಾರದಿಂದ ಸುಳ್ಳ ಗ್ರಾಮದ ರಸ್ತೆಯಲ್ಲಿರುವ ಅಂತ್ಯಕ್ರಿಯೆ ಸ್ಥಳಕ್ಕೆ ಪಾರ್ಥಿವ ಶರೀರದ ಮೆರವಣಿಗೆ ನಡೆಸಲಾಯಿತು. ಇನ್ನೂ ಅಂತ್ಯಕ್ರಿಯೆ ನಡೆಯುವ ಸ್ಥಳಕ್ಕೆ ಗುರೂಜಿಯವರ ಪ್ರೀತಿಪಾತ್ರವಾಗಿದ್ದ ನಾಯಿ ಬಂದಿತ್ತು. ಪ್ರೀನ್ಸ್ ಎನ್ನುವ ನಾಯಿ ಚಂದ್ರಶೇಖರ ಗುರೂಜಿ ನೋಡಿ ನೋಡಿ ಕಣ್ಣೀರು ಹಾಕಿತು. ಇದಕ್ಕೂ ಮುಂಚೆ ಪಾರ್ಥಿವ ಶರೀರದ ಬಾಕ್ಸ್ ಮೇಲೆ ಕುಳಿತು ಪ್ರಿನ್ಸ್ ಅಂತಿಮ ದರ್ಶನ ಪಡೆಯಿತು.
ಸಾವಿರಾರು ಕೋಟಿ ಹಣ ಸಂಪಾದಿಸಿ, ನಾಲ್ಕು ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ಕೊಟ್ಟಿದ್ದ ಗುರೂಜಿಗೆ, ನೆರೆದ ಸಿಬ್ಬಂದಿ, ಭಾವಪೂರ್ಣ ವಿದಾಯ ಹೇಳಿದ್ರು. ಸರಳ ವಾಸ್ತುವಿನ ಮೂಲಕ ಹಣೆಬರಹ ಬರೆಯುತ್ತಿದ್ದ ಗುರೂಜಿಗೆ ತನ್ನದೇ ಹಣೆಬರಹ ಕೈಕೊಟ್ಟಿದ್ದು ಮಾತ್ರ ವಿಪರ್ಯಾಸ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
06/07/2022 10:32 pm