ಹುಬ್ಬಳ್ಳಿ: ಗೋವಾಕ್ಕೆಂದು ಸ್ನೇಹಿತರ ಜೊತೆ ಹೊರಟ ಆತ ಹುಬ್ಬಳ್ಳಿ ಕೂಡಾ ದಾಟಿಲ್ಲ. ಅಷ್ಟರಲ್ಲೇ ಶವವಾಗಿ ಪತ್ತೆಯಾಗಿದ್ದಾನೆ. ಇದೀಗ ಆ ಸಾವಿನ ಸುತ್ತ ದೊಡ್ಡ ಅನುಮಾನದ ಹುತ್ತವೇ ಬೆಳೆದಿದೆ.
ಹೀಗೆ ಕೈಯಲ್ಲಿ ಮಗನ ಪೋಟೋ ಹಿಡಿದುಕೊಂಡು ಕಣ್ಣೀರು ಹಾಕುತ್ತಿರುವ ಇವರು ಗಿರಣಿಚಾಳದ ನಿವಾಸಿ ನಾಗರಾಜ ಚಿಕ್ಕತುಂಬಳ. ಇವರ ಮಗನೇ ವೀರೇಶ ಚಿಕ್ಕತುಂಬಳ. ಮನೆಯಲ್ಲಿ ಗೆಳೆಯರ ಜೊತೆ ಗೋವಾಕ್ಕೆ ಹೋಗಬೇಕೆಂದು ಹೇಳಿ ಹೋಗಿದ್ದ. ರಾತ್ರಿ ವೇಳೆ ಗೆಳೆಯರ ಜೊತೆ ಗೋವಾ ಟ್ರೈನ್ ಕೂಡ ಹತ್ತಿದ್ದಾರೆ. ಆದ್ರೆ ಹುಬ್ಬಳ್ಳಿಯ ಉಣಕಲ್ ಅಮರಗೋಳದ ನಡುವೆ ರೈಲ್ವೆ ಹಳಿಯಲ್ಲಿ ಸಾವನ್ನಪ್ಪಿದ್ದಾನೆ ಎಂದು ಸುದ್ದಿ ತಿಳಿದು ಬಂದಿದ್ದು ಇತ್ತ ಗೆಳೆಯರು ಎಸ್ಕೇಪ್ ಆಗಿದ್ದಾರೆ. ಮಗನ ಸಾವಿಗೆ ಅವನ ಗೆಳೆಯರಾದ ಉದಯ, ಕಿರಣ್ ಮತ್ತು ಇನ್ನಿತರರೇ ಕಾರಣ. ಅವರೇ ಅವನಿಗೆ ಕಾಲ್ ಮಾಡಿ ಕರೆಸಿ ಸಾಯಿಸಿದ್ದಾರೆಂದು ವೀರೇಶ ಪಾಲಕರು ಆರೋಪ ಮಾಡುತ್ತಿದ್ದಾರೆ.
ಇನ್ನು ಸಾವನ್ನಪ್ಪಿದ ವೀರೇಶ್ ಚಿಕ್ಕತುಂಬಳನಿಗೆ ತನ್ನ ಗೆಳೆಯರು ಕರೆಮಾಡಿ 4 ಜನ ಗೋವಾಕ್ಕೆ ಹೋಗೋಣ ಎಂದು ಕರೆದುಕೊಂಡು ಹೋಗಿದ್ರಂತೆ. ಹೋದ ನಾಲ್ಕು ಜನರಲ್ಲಿ ಒಬ್ಬ ಗಾಯಗೊಂಡಿದ್ದ. ಉಳಿದ ಇನ್ನಿಬ್ಬರು ಪತ್ತೆ ಇಲ್ಲ. ಮತ್ತು ಗಾಯವಾದ ಯುವಕ ಕಿಮ್ಸ್ ನಿಂದ ನಾಪತ್ತೆ ಆಗಿದ್ದಾನೆ. ಇದಕ್ಕೆ ಪೊಲೀಸರು ಸೂಕ್ತವಾದ ತನಿಖೆ ಮಾಡಿ ನನ್ನ ಮಗನ ಸಾವಿಗೆ ನ್ಯಾಯ ಕೊಡಿಸಿ ಎಂದು ವೀರೇಶನ ಪೋಷಕರು ಅಳಲು ತೋಡಿಕೊಂಡಿದ್ದಾರೆ.
ಈಗಾಗಲೇ ವೀರೇಶನ ಪೋಷಕರು ರೈಲ್ವೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಒಟ್ಟಿನಲ್ಲಿ ಈತನ ಸಾವು ಆಕಸ್ಮಿಕನೋ ಅಥವಾ ಕೊಲೆನೋ ಎಂಬುದು ಪೊಲೀಸರ ತನಿಖೆಯಿಂದ ತಿಳಿಯಬೇಕಾಗಿದೆ....
ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ.
Kshetra Samachara
06/06/2022 06:49 pm