ಹುಬ್ಬಳ್ಳಿ: ಆ ಕುಟುಂಬ ಮೊನ್ನೆಯಷ್ಟೇ ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಮಾಧ್ಯಮದ ಮುಂದೆ ಕಣ್ಣೀರು ಹಾಕಿತ್ತು. ಈಗ ಕುಟುಂಬವೇ ಆಸ್ಪತ್ರೆಯ ಮುಂದೆ ಉಪವಾಸ ಸತ್ಯಾಗ್ರಹವನ್ನು ಮಾಡುತ್ತಿದೆ. ಈಗ ಧರಣಿ ಮೂರನೇ ದಿನವೂ ಮುಂದುವರೆದಿದೆ. ಆದರೆ ಅಧಿಕಾರಿಗಳಾಗಲಿ ಸಚಿವರಾಗಲಿ ಈ ಕಡೆಗೆ ಕಿಂಚಿತ್ತೂ ಗಮನ ಹರಿಸಿಲ್ಲ.
ಹೀಗೆ ಉಪವಾಸ ಕುಳಿತು ಧರಣಿ ಕುಳಿತಿರುವ ಮಹಿಳೆ ಶಾಂತಾ ಪ್ರಶಾಂತಕುಮಾರ್ ಹೊಸಳ್ಳಿ. ಈ ಮಹಿಳೆಯ ಗಂಡ ಪ್ರಶಾಂತಕುಮಾರ್ ಹುಬ್ಬಳ್ಳಿಯ ಕಾರವಾರ ರಸ್ತೆಯಲ್ಲಿರುವ ಇಎಸ್ಐ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸುಮಾರು ಐದಾರೂ ತಿಂಗಳಿಂದ ವೇತನ ಇಲ್ಲದೇ ಕರ್ತವ್ಯ ನಿರ್ವಹಣೆ ಮಾಡುವಂತಾಗಿದೆ. ಇಷ್ಟೆ ಆಗಿದ್ದರೇ ಈ ಕುಟುಂಬ ಹೇಗೋ ನೀರು ಕುಡಿದಾದರೂ ಜೀವನ ನಡೆಸುತ್ತಿತ್ತು. ಆದರೆ ಇಲ್ಲಿ ಆಗಿದ್ದು ಮಾತ್ರ ಬೇರೆಯೇ. ಇಲ್ಲಿ ಸಿಬ್ಬಂದಿಯೊಬ್ಬರು ಪ್ರಶಾಂತಕುಮಾರ್ ಗೆ ಕಿರುಕುಳ ನೀಡುತ್ತಿದ್ದು, ಬೇಕಾಬಿಟ್ಟಿಯಾಗಿ ವರ್ಗಾವಣೆ ಮಾಡುವ ಮೂಲಕ ದರ್ಪವನ್ನು ಮೆರೆಯುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿರುವ ಕುಟುಂಬ ಆಸ್ಪತ್ರೆಯ ಮುಂದೆಯೇ ಧರಣಿ ನಡೆಸುತ್ತಿದ್ದಾರೆ.
ಇನ್ನೂ 2006ರಂದು ಸೇವೆಗೆ ಸೇರಿರುವ ಪ್ರಶಾಂತಕುಮಾರ್ ರಾಜ್ಯದ ಹಲವಾರು ಕಡೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಆದರೆ ಹುಬ್ಬಳ್ಳಿ ಕಾರವಾರ ರಸ್ತೆಯಲ್ಲಿರುವ ಕಾರ್ಮಿಕ ರಾಜ್ಯ ವಿಮಾ ಆಸ್ಪತ್ರೆಯಲ್ಲಿ ಅಧಿಕಾರಿಗಳ ಕಿರುಕುಳ ಹಾಗೂ ಅನಧಿಕೃತವಾಗಿ ವೇತನ ತಡೆಹಿಡಿಯುವ ಮೂಲಕ ಕುಟುಂಬದ ನಿರ್ವಹಣೆ ಜೊತೆಗೆ ಆಟ ಆಡುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದ ಹೋರಾಟಗಾರರು ಧರಣಿಗೆ ಬೆಂಬಲ ನೀಡಿದ್ದಾರೆ.
ಒಟ್ಟಿನಲ್ಲಿ ಅಧಿಕಾರಿಗಳ ದರ್ಪವೋ ಅಥವಾ ಇನ್ನಾವುದೇ ಕಾರಣವೋ ಗೊತ್ತಿಲ್ಲ. ಆದರೆ ನೌಕರನ ಕುಟುಂಬ ಮಾತ್ರ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದೆ. ಈ ಬಗ್ಗೆ ಕಾರ್ಮಿಕ ಸಚಿವರು ಹಾಗೂ ಸರ್ಕಾರ ಸೂಕ್ತ ರೀತಿಯಲ್ಲಿ ಕ್ರಮಗಳನ್ನು ಜರುಗಿಸಬೇಕಿದೆ.
Kshetra Samachara
25/05/2022 06:41 pm