ಧಾರವಾಡ: ಮದುವೆಯ ಆಹ್ವಾನ ಪತ್ರಿಕೆ ಹಂಚಿದ್ದ ಮದುಮಗನೇ ಮದುವೆಗೂ ಮುನ್ನವೇ ಮೃತಪಟ್ಟಿರುವ ಘಟನೆ ಧಾರವಾಡ ತಾಲೂಕಿನ ಕಬ್ಬೇನೂರು ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಕಬ್ಬೇನೂರು ಗ್ರಾಮದ ರಾಘವೇಂದ್ರ ಶಿಂಧೋಗಿ (32) ಎಂಬುವವರೇ ಮೃತಪಟ್ಟ ವ್ಯಕ್ತಿ. ಮೇ 12 ರಂದು ಕಲಘಟಗಿ ತಾಲೂಕಿನ ವಧುವಿನೊಂದಿಗೆ ಮದುವೆ ನಿಶ್ಚಿಸಲಾಗಿತ್ತು. ಹೀಗಾಗಿ ಮದುವೆ ಸಂಭ್ರಮದ ಖುಷಿಯಲ್ಲಿದ್ದ ಕುಟುಂಬಸ್ಥರು ಮದುವೆ ಆಮಂತ್ರಣ ಹಂಚಿ ಬಂದು, ಮೇ 10 ರಂದು ಮನೆಯಲ್ಲಿ ದೇವತಾ ಕಾರ್ಯಕ್ಕೆ ಸಿದ್ಧತೆ ಮಾಡಿಕೊಂಡಿದ್ದರು. ಮೇ 9 ರಂದು ಇಡೀ ದಿನ ಗೆಳೆಯರಿಗೆ ಮದುವೆಯ ಆಹ್ವಾನ ಕೊಟ್ಟು ಬಂದು ಮನೆಯಲ್ಲಿ ಮಲಗಿದ್ದ ರಾಘವೇಂದ್ರ, ಮೇ 10 ರಂದು ಬೆಳಿಗ್ಗೆ ಎಲ್ಲರೂ ಎದ್ದಾಗ ಮನೆಯಲ್ಲಿಯೇ ಇರಲಿಲ್ಲ.
ಮದುಮಗನಿಗೆ ಹುಡುಕಾಟ ನಡೆಸಿದ ಕುಟುಂಬಸ್ಥರಿಗೆ ಸಂಜೆ ಹೊತ್ತಿಗೆ ಹೊಲವೊಂದರಲ್ಲಿ ರಾಘವೇಂದ್ರನ ಶವ ಪತ್ತೆಯಾಗಿದ್ದು, ಪಕ್ಕದಲ್ಲಿಯೇ ಕ್ರಿಮಿನಾಶಕದ ಬಾಟಲಿಯೂ ಸಿಕ್ಕಿದೆ. ಇದು ಮೇಲ್ನೋಟಕ್ಕೆ ಆತ್ಮಹತ್ಯೆ ಮಾಡಿರುವ ಬಗ್ಗೆ ಕಂಡು ಬಂದರೂ ಕೊಲೆ ಆಗಿರುವ ಬಗ್ಗೆ ಗ್ರಾಮಸ್ಥರಲ್ಲಿ ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ಕುಟುಂಬಸ್ಥರ ಪ್ರಾಥಮಿಕ ಮಾಹಿತಿ ಅನ್ವಯ ಸಾಲದ ಬಾಧೆಯಿಂದ ಆತ್ಮಹತ್ಯೆ ಮಾಡಿರುವ ಬಗ್ಗೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೇ 12 ರಂದು ಮದುವೆ ಆಗಬೇಕಿದ್ದ ಮನೆಯಲ್ಲಿ ಮದುವೆ ನಿಶ್ಚಿಯಿಸಿದ್ದ ದಿನದಂದೇ ತಿಥಿ ಕಾರ್ಯ ನೆರವೇರಿಸಲಾಗಿದೆ.
Kshetra Samachara
14/05/2022 06:14 pm