ಹುಬ್ಬಳ್ಳಿ: ಹಳೆ ಹುಬ್ಬಳ್ಳಿಯ ಗಲಭೆ ಪ್ರಕರಣದ ಮಾಸ್ಟರ್ ಮೈಂಡ್ ಗಳನ್ನು ರಾತ್ರಿಯಿಂದಲೇ ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ವಿಚಾರಣೆ ವೇಳೆ ವಾಸೀಂ ಪಠಾಣ್ ಸ್ಫೋಟಕ ಹೇಳಿಕೆ ಹೊರಹಾಕಿದ್ದು, ನಿಜವಾಗಿಯೂ ಗಲಾಟೆ ಮಾಡಿದವರ ಬಣ್ಣ ಬಯಲು ಮಾಡುತ್ತೇನೆ ಎಂದಿದ್ದಾನೆ.
ಹಳೆ ಹುಬ್ಬಳ್ಳಿ ಠಾಣೆಯಲ್ಲಿ ಇಬ್ಬರ ವಿಚಾರಣೆ ವೇಳೆ ಸ್ಫೋಟಕ ಹೇಳಿಕೆ ನೀಡಿದ್ದು, ನಿಜವಾಗಿ ಈ ಪ್ರಕರಣದ ಮಾಸ್ಟರ್ ಮೈಂಡ್ ಗಳು ಬೇರೆಯೇ ಇದ್ದಾರೆ. ತಪ್ಪಿತಸ್ಥರ ಬಣ್ಣ ಬಟಾಬಯಲು ಮಾಡ್ತೇನಿ ಎಂದ ವಾಸೀಂ ಪಠಾಣ್, ನಾನು ಯಾವುದೇ ತಪ್ಪು ಮಾಡಿಲ್ಲ. ನಾನು ವಾಟ್ಸ್‌ಆಪ್ ಗ್ರೂಪ್ ರಚಿಸಿದ್ದು ನಿಜ. ಜನರನ್ನು ಸೇರಿಸಿದ್ದೂ ಸತ್ಯ. ಆದರೆ, ಕಲ್ಲೂ ತೂರಾಟ ಮಾಡಿಸಿದ್ದು ನಾನಲ್ಲ ಎಂದು ಪೊಲೀಸ್ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾನೆ.
ಈ ಪ್ರಕರಣದಲ್ಲಿ ನನ್ನನ್ನು ಬಲಿ ತೆಗೆದುಕೊಂಡಿದ್ದಾರೆ. ನನ್ನನ್ನು ಬೇಕು ಅಂತಲೇ ಸಿಕ್ಕಿಸುವ ಕೆಲಸ ಮಾಡಿದ್ದಾರೆ. ನನಗೆ ಮೋಸ ಮಾಡಿದವರ ಹೆಸರುಗಳನ್ನು ಪೊಲೀಸರ ಮುಂದೆ ಹೇಳುತ್ತೇನೆ. ನನ್ನನ್ನು ಈ ಹಂತಕ್ಕೆ ತಂದವರನ್ನು ನಾನು ಸುಮ್ಮನೇ ಬಿಡುವ ಮಾತೇ ಇಲ್ಲ ಎಂದಿದ್ದಾನೆ.
ವಾಸೀಂ ವಿಚಾರಣೆ ಈ ರೀತಿ ಆದ್ರೆ, ತೌಫಿಕ್ ಕತೆನೇ ಬೇರೆ. ವಾಸೀಂ ಜೊತೆಗೆ 5 ದಿನಗಳ ಕಸ್ಟಡಿಯಲ್ಲಿರುವ ತೌಫಿಕ್, ವಿಚಾರಣೆ ವೇಳೆ ಕಣ್ಣೀರು ಹಾಕುತ್ತಿದ್ದಾನೆ. ನನಗೆ ಈ ಪರಿಸ್ಥಿತಿ ಬರಲು ವಾಸೀಂ ಪಠಾಣ್ ಕಾರಣ ಎಂದು ದೂರಿದ ತೌಫಿಕ್, ನೀನು ಗಲಭೆ ಆದ ದಿನವೇ ಪೊಲೀಸರ ಮುಂದೆ ಸರೆಂಡರ್ ಆಗಬೇಕಿತ್ತು. ಆಗ ಠಾಣೆಗೆ ಬರುವ ಮಾತೇ ಇರಲಿಲ್ಲ. ನಿನ್ನಿಂದ ನನಗೆ ಸ್ಥಿತಿ ಬಂದಿದೆ ಎಂದ ತೌಫಿಕ್, ವಾಸೀಂ ಪಠಾಣ್ ನನ್ನು ದೂರುತ್ತಾ ಅಳಲು ತೋಡಿಕೊಂಡಿದ್ದಾನೆ.
ಒಟ್ಟಿನಲ್ಲಿ ಒಬ್ಬರ ಮೇಲೊಬ್ಬರು ಆರೋಪ ಮಾಡುತ್ತಿದ್ದಾರೆ. ವಾಸೀಂ ಪಠಾಣ್ ʼನಾನು ಬಲಿಕಾ ಬಕ್ರಾʼ ಅಂತ ಹೇಳಿಕೊಂಡಿದ್ದು, ಈ ಬಗ್ಗೆ ತನಿಖೆ ನಂತರವೇ ಯಾರು ತಪ್ಪಿತಸ್ಥರು, ಘಟನೆಗೆ ಕುಮ್ಮಕ್ಕು ನೀಡಿದವರು ಯಾರು ಎಂಬ ಸತ್ಯ ಹೊರ ಬರಲಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
23/04/2022 02:19 pm