ಹುಬ್ಬಳ್ಳಿ: ಮನೆಗೆ ಗ್ಲಾಸ್ ಹಾಕಿಸುವ ನೆಪದಲ್ಲಿ ಅಪರಿಚಿತನೊಬ್ಬ ಕರೆ ಮಾಡಿ ಶನಿವಾರ ರಾತ್ರಿ ಕರೆಸಿಕೊಂಡು ನಗರದ ಉಣಕಲ್‌ನ ಮಾರಡಗಿ ರಸ್ತೆಯ ರೈಲ್ವೇ ಹಳಿ ಬಳಿ ಹಲ್ಲೆಗೈದು ಸುಲಿಗೆ ಮಾಡಿದ್ದಾರೆ. ಅದರಲ್ಲಿ ಇಬ್ಬರನ್ನು ಎಪಿಎಂಸಿ, ನವನಗರ ಠಾಣೆ ಪೊಲೀಸರು ಬಂಧಿಸಿದ್ದು, ಇನ್ನು ಮೂವರು ತಲೆಮರೆಸಿಕೊಂಡಿದ್ದಾರೆ.
ನೇಕಾರನಗರ ಗಣೇಶ ಕಾಲೋನಿಯ ವಿಶ್ವನಾಥ ಎಂಬುವರಿಗೆ ಅಪರಿಚಿತನೊಬ್ಬ ಕರೆಮಾಡಿ, ಮನೆಗೆ ಗ್ಲಾಸ್ ಹಾಕಬೇಕಿದೆ ಎಂದಿದ್ದಾನೆ. ಅವರನ್ನು ನಂಬಿ ಬಂದ ವಿಶ್ವನಾಥ ಹಾಗೂ ಆತನ ಗೆಳೆಯನನ್ನು ಅಪರಿಚಿತರ ತಂಡ ರಾತ್ರಿ ಉಣಕಲ್ ಪ್ರೆಸಿಡೆಂಟ್ ಹೋಟೆಲ್ ಹತ್ತಿರ ಕರೆಸಿಕೊಂಡು ಮನೆ ತೋರಿಸುವ ನೆಪದಲ್ಲಿ ಎರಡು ಬೈಕ್‌ಗಳಲ್ಲಿ ಮಾರಡಗಿ ರಸ್ತೆಗೆ ಕರೆದೊಯ್ದಿದ್ದಾರೆ. ಅಲ್ಲಿ ಬೈಕ್‌ಗಳಲ್ಲಿ ಬಂದಿದ್ದ ಮೂವರು ವಾಹನದಿಂದ ವಿಶ್ವನಾಥ ಮತ್ತು ಅವರ ಗೆಳೆಯನನ್ನು ಇಳಿಸಿ ಹಲ್ಲೆ ಮಾಡಿ 30 ಸಾವಿರ ನಗದು, ಎರಡು ಮೊಬೈಲ್ ಬೈಕ್‌ನ ಕೀಲಿ ಕಿತ್ತುಕೊಂಡು ಪರಾರಿಯಾಗಿದ್ದರು.
ಈ ಕುರಿತು ಎಪಿಎಂಸಿ ನವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಬಂಧಿಸಿ, ಅವರಿಂದ ಎರಡು ಮೊಬೈಲ್ ವಶಪಡಿಸಿಕೊಂಡು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ತಲೆಮರೆಸಿಕೊಂಡಿರುವ ಮೂವರ ಪತ್ತೆಗಾಗಿ ಪೊಲೀಸರು ಬಲೆ ಬಿಸಿದ್ದಾರೆ.
Kshetra Samachara
13/04/2022 11:21 am