ವರದಿ: ಮಲ್ಲೇಶ್ ಸೂರಣಗಿ, ʼಪಬ್ಲಿಕ್ ನೆಕ್ಸ್ಟ್ʼ ಹುಬ್ಬಳ್ಳಿ
ಹುಬ್ಬಳ್ಳಿ: ಆತ ನೋಡೊಕೆ ಮಾನಸಿಕ ಅಸ್ವಸ್ಥನಂತಿದ್ದ. ಇಲ್ಲಿಯೇ ಎಲ್ಲೋ ಭಿಕ್ಷೆ ಬೇಡಿಕೊಂಡಿರುತ್ತಿದ್ದ ಅಂದುಕೊಂಡಿದ್ದವರಿಗೆ ನಿಜಕ್ಕೂ ಶಾಕ್! ಈ ಹಂತಕನ ಬಗ್ಗೆ ಪೊಲೀಸ್ ಆಯುಕ್ತರೇ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.
ಹುಬ್ಬಳ್ಳಿಯ ಕೃಷ್ಣಭವನದ ಹೊಟೇಲ್ ಮುಂಭಾಗ ಮಹಿಳೆಯ ಹತ್ಯೆ ಮಾಡಿದವನೇ, 2 ವರ್ಷಗಳ ಹಿಂದೆ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮತ್ತೊಂದು ಕೊಲೆ ಮಾಡಿದ್ದಾನೆಂದು ಪೊಲೀಸ್ ಕಮಿಷನರ್ ಲಾಬುರಾಮ್ ತಿಳಿಸಿದ್ದಾರೆ. ಹಣಕ್ಕಾಗಿಯೇ ಧಾರವಾಡ ಮೂಲದವ ಕೊಲೆ ಮಾಡುತ್ತಿದ್ದ.
ಈ ಹಿಂದೆಯೂ ತಾನು ಮಾಡಿದ ಕೊಲೆಯೊಂದನ್ನು ಒಪ್ಪಿದ್ದು, ಮತ್ತಷ್ಟು ವಿವರ ಬಗ್ಗೆ ವಿಚಾರಣೆಗೊಳಪಡಿಸಲಾಗಿದೆ. ಬೀದಿಯಲ್ಲಿ ಕಸ ಆರಿಸುವ, ಜೀವನ ಮಾಡುವವರನ್ನು ಟಾರ್ಗೆಟ್ ಮಾಡುತ್ತಿದ್ದ ಈತ ಇನ್ನಷ್ಟು ಕೊಲೆಗೈದಿರುವ ಶಂಕೆಯಿದೆ. ಆದರೆ, ಪೊಲೀಸ್ ಆಯುಕ್ತರು ತನಿಖೆ ನಂತರವೇ ಸವಿವರ ಮಾಹಿತಿ ಲಭ್ಯವಾಗಬೇಕಿದೆ ಅಂತಾರೆ.
ಇನ್ನು, ಈ ನರಹಂತಕ ಚಿಂದಿ ಆಯುವ ರೀತಿ ತಿರುಗಾಡಿ, ಭಿಕ್ಷೆ ಬೇಡಿ ಹಣ ಕೂಡಿಟ್ಟವರನ್ನು ಕಲ್ಲಿನಿಂದ ತಲೆ ಹೊಡೆದು ಕೊಲೆ ಮಾಡಿ, ಹಣ ದೋಚಿ ಪರಾರಿಯಾಗುತ್ತಿದ್ದ. ಮೊನ್ನೆಯಷ್ಟೇ ದಾವಣಗೆರೆ ಮೂಲದ ಮಹಿಳೆಯ ಕೊಲೆ ಮಾಡಿದ ಬೆನ್ನಲ್ಲೇ ಸಾಕ್ಷ್ಯ ಕಲೆಹಾಕಿದ ಪೊಲೀಸರು, ಹಂತಕನ ಹೆಡೆಮುರಿ ಕಟ್ಟಿದ್ದಾರೆ. ಆರೋಪಿಯ ಹೆಸರು ಹೇಳದ ಕಮಿಷನರ್, ಮತ್ತಷ್ಟು ಕೊಲೆಗಳ ಬಗ್ಗೆ ತನಿಖೆ ಮುಂದುವರೆಸಿದ್ದಾಗಿ ಹೇಳಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
17/03/2022 09:22 pm