ಕುಂದಗೋಳ: ಒಂದೆಡೆ ಅತಿವೃಷ್ಟಿ ಇನ್ನೊಂದೆಡೆ ಕೊರೊನಾ ಸುಳಿಗೆ ಸಿಲುಕಿ ಕಷ್ಟದ ಜೀವನ ನೂಕುತ್ತಿರುವ ಹಳ್ಳಿಗರಿಗೆ ಪಾಲಿಗೆ, ಅಕ್ರಮ ಮದ್ಯ ಮಾರಾಟ ಶಾಪವಾಗಿ ಪರಿಣಮಿಸಿದ್ದು, ನಾಲ್ಕು ಪುಡಿಗಾಸು ಕೂಲಿ ಮಾಡಿ ದುಡಿದ ಮಹಿಳೆಯರ ಹಣ ನಶೆಯ ಪಾಲಾಗುತ್ತಿದೆ.
ಕುಂದಗೋಳ ತಾಲೂಕಿನ ಹಳ್ಳಿಗಳಲ್ಲಿ ಕಳೆದ ಹಲವಾರು ವರ್ಷಗಳಿಂದ ಅಕ್ರಮ ಮದ್ಯ ಮಾರಾಟ ಹೆಚ್ಚಿದ್ದು ಬಾಗಿಲು ಮುಚ್ಚಿದ ಶಾಲೆ, ಕಾಲೇಜು, ದೇವಸ್ಥಾನದ ಆವರಣ, ಕೆರೆ, ಕಟ್ಟೆಗಳಲ್ಲಿ ಸಾರಾಯಿ ಕುಡುಕರ ಹಾವಳಿ ಹೆಚ್ಚಾಗಿದೆ. ಇನ್ನೊಂದೆಡೆ ಕಿರಾಣಿ ಅಂಗಡಿ, ಚಹಾ ಅಂಗಡಿ, ಕೆಲವೆಡೆ ಮನೆಗಳಲ್ಲೇ ಸಾರಾಯಿ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿವೆ.
ಈ ಸಂಬಂಧ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಯರಗುಪ್ಪಿ ಗ್ರಾ.ಪಂ ಸದಸ್ಯರು ಸೇರಿ ಹಲವಾರು ಹಳ್ಳಿಗಳಿಂದ ಕುಂದಗೋಳ ತಹಶೀಲ್ದಾರ, ಗ್ರಾಮೀಣ ಪೊಲೀಸ್ ಠಾಣೆ, ಅಷ್ಟೇ ಯಾಕೆ ? ಶಾಸಕಿ ಕುಸುಮಾವತಿ ಶಿವಳ್ಳಿ ಸೇರಿ ವಲಯ ಅಬಕಾರಿ ಇಲಾಖೆಗೆ ದೂರು ಬಂದರೂ ಅಬಕಾರಿ ಇಲಾಖೆ ಮಾತ್ರ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿರುವುದು ಬಡ ಮಧ್ಯಮ ಕುಟುಂಬಗಳಿಗೆ ಬರೆ ಎಳೆದಂತಾಗಿದೆ.
ಇನ್ನೂ ಕೆಲ ಹಳ್ಳಿಗಳಲ್ಲಿ ಹಗಲಲ್ಲೇ ಅಕ್ರಮ ಮದ್ಯ ದೊರೆಯುತ್ತಿದ್ದರೂ, ಕುಂದಗೋಳ ಅಬಕಾರಿ ನಿರೀಕ್ಷಕರು ದಿವ್ಯ ನಿರ್ಲಕ್ಷ್ಯ ತೋರಿದ್ದಾರೆ. ಈ ವಿಚಾರವಾಗಿ ಸಾರ್ವಜನಿಕರ ಕಳಕಳಿ ಮೇರೆಗೆ ಕಚೇರಿಗೆ ವಿಚಾರಿಸಲು ಹೋದ ಪಬ್ಲಿಕ್ ನೆಕ್ಸ್ಟ್‌ಗೂ ಸಹ ಸರಿಯಾದ ಪ್ರತಿಕ್ರಿಯೆ ನೀಡಿಲ್ಲ.
ಈ ಕಾರಣ ಅಬಕಾರಿ ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಕರೆ ಮಾಡಿದಾಗ ಹಳ್ಳಿಗಳಲ್ಲಿ ಹೆಚ್ಚುತ್ತಿರುವ ಅಕ್ರಮ ಮದ್ಯ ಮಾರಾಟದ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಅದು ಎಷ್ಟರ ಮಟ್ಟಿಗೆ ಹಳ್ಳಿಗಳ ವಾತಾವರಣ ಬದಲಿಸುತ್ತದೆ ಅನ್ನೋದನ್ನ ಕಾದು ನೋಡಬೇಕಿದೆ.
ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ
Kshetra Samachara
02/02/2022 01:59 pm