ಅಣ್ಣಿಗೇರಿ: ಈತ ಅಂತಿಂಥ ಸಾಮಾನ್ಯ ಕಳ್ಳನಲ್ಲ. ಇವನು ಪೊಲೀಸರ ವಾಹನವನ್ನೇ ಕದಿಯಲು ಹೊಂಚು ಹಾಕಿದ್ದ. ಅದರಂತೆ ಠಾಣೆ ಮುಂದೆ ನಿಲ್ಲಿಸಿದ್ದ ಪೊಲೀಸರ ಬೊಲೆರೋ ಜೀಪ್ ಕದ್ದು ಆತ ಜೀಪ್ ಸಮೇತ ಪರಾರಿಯಾಗಿದ್ದ.
ಈ ಸಿನಿಮೀಯ ಘಟನೆ ನಡೆದಿದ್ದು ಬೇರೆಲ್ಲೂ ಅಲ್ಲ, ಧಾರವಾಡ ಜಿಲ್ಲೆ ಅಣ್ಣಿಗೇರಿ ಪಟ್ಟಣದಲ್ಲಿ ನಡೆದಿದೆ. ನಿನ್ನೆ ಮಂಗಳವಾರ ಬೆಳಗಿನ ಜಾವ ಆರೋಪಿ ನಾಗಪ್ಪ ಎಂಬ ಖದೀಮ ತನ್ನ ಚಾಣಾಕ್ಷತೆಯಿಂದ ಪೊಲೀಸ್ ಜೀಪ್‌ಅನ್ನು ಎಗರಿಸಿಕೊಂಡು ಪರಾರಿಯಾಗಿದ್ದಾನೆ. ವಿಷಯ ತಿಳಿದು ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಹಾವೇರಿ ಜಿಲ್ಲೆ ಬ್ಯಾಡಗಿ ಪಟ್ಟಣದಲ್ಲಿ ಆರೋಪಿ ಸಮೇತ ಜೀಪ್‌ಅನ್ನು ಪತ್ತೆ ಮಾಡಿದ್ದಾರೆ. ಸದ್ಯ ಆರೋಪಿ ನಾಗಪ್ಪನನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಕೆ.ಎ 25 ಜಿ 0861 ಸಂಖ್ಯೆಯ ಬೊಲೆರೊ ಜೀಪ್ ಇದಾಗಿದ್ದು, ಮರಳಿ ಠಾಣೆ ಮುಂದೆ ನಿಂತಿದೆ. ಕಳ್ಳರನ್ನು ಹಿಡಿಯಬೇಕಾದ ಪೊಲೀಸರ ಜೀಪ್‌ಅನ್ನೇ ಕದ್ದ ಖದೀಮನ ಕೈಚಳಕ ಕಂಡು ಅಣ್ಣಿಗೇರಿ ನಿವಾಸಿಗಳು ಬೆರಗಾಗಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
02/02/2022 12:04 pm