ನವಲಗುಂದ : ಹೀಗೆ ರಕ್ತದ ಮಡುವಲ್ಲಿ ಬಿದ್ದ ಮಹಿಳೆಯ ಮೃತ ದೇಹ. ಭಯಭೀತರಾದ ಜನರು. ಜನರನ್ನು ಚದರಿಸುತ್ತಿರುವ ಪೊಲೀಸರು. ಈ ಎಲ್ಲ ದೃಶ್ಯ ಕಂಡು ಬಂದಿದ್ದು ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದ ಪುರಾತನ ವೆಂಕಟೇಶ್ವರ ದೇವಸ್ಥಾನದ ಬಳಿ. ಹಾಡಹಗಲೇ ಅಣ್ಣನಿಂದಲೇ ತಂಗಿಯ ಭಯಾನಕ ಕೊಲೆ ಕಂಡ ಜನ ಬೆಚ್ಚಿಬಿದ್ದು ಆತಂಕಗೊಂಡಿದ್ರು.
31 ವರ್ಷದ ಶಶಿಕಲಾ ಎಂಬುವವರೇ ಬರ್ಬರವಾಗಿ ಕೊಲೆಯಾದವರು. ಈಕೆ ಧಾರವಾಡ ಜಿಲ್ಲೆ ನವಲಗುಂದ ಪಟ್ಟಣದ ನಿವಾಸಿ. ಕೆಲ ವರ್ಷಗಳ ಹಿಂದೆ ಈಕೆಗೆ ಹುಬ್ಬಳ್ಳಿ ತಾಲೂಕಿನ ಅರಳಿಕಟ್ಟಿ ಗ್ರಾಮದ ವ್ಯಕ್ತಿಯೊಂದಿಗೆ ಮದುವೆಯಾಗಿತ್ತು. ಮದುವೆ ಆಗಿ ಆರೇ ತಿಂಗಳಲ್ಲಿ ಪತಿ ಅಕಾಲಿಕವಾಗಿ ಮೃತಪಟ್ಟಿದ್ದ. ಪತಿಯ ನಿಧನದ ನಂತರ ಶಶಿಕಲಾ ತವರು ಮನೆಗೆ ಬಂದು ವಾಸಿಸುತ್ತಿದ್ದಳು. ಇದೇ ವೇಳೆ ಇತ್ತೀಚಿಗೆ ರವಿ ಪಟಾದ ಎಂಬ ವ್ಯಕ್ತಿಯೊಂದಿಗೆ ಶಶಿಕಲಾಳಿಗೆ ಸ್ನೇಹವಾಗಿತ್ತು. ಅದಾಗಲೇ ಪತಿಯನ್ನು ಕಳೆದುಕೊಂಂಡು ಒಂಟಿಯಾಗಿದ್ದ ಜೀವಕ್ಕೆ ರವಿ ಆಸರೆಯಾಗಬಲ್ಲ ಅಂತ ನಂಬಿ ಆತನೊಂದಿಗೆ ಇದೇ ತಿಂಗಳ 18 ರಂದು ಶಶಿಕಲಾ ಮದುವೆಯಾಗಿದ್ದಳು. ಮದುವೆಯ ಬಳಿಕ ಪಟ್ಟಣದ ಪುರಾತನ ವೆಂಕಟೇಶ್ವರ ದೇವಸ್ಥಾನದ ಬಳಿ ರವಿ ಹಾಗೂ ರವಿಯ ತಾಯಿಯೊಂದಿಗೆ ವಾಸಿಸುತ್ತಿದ್ದಳು. ಆದರೆ ಈ ಮದುವೆಗೆ ಮೊದಲಿನಿಂದಲೂ ಶಿಶಿಕಲಾಳ ಅಣ್ಣ ಮಹಾಂತೇಶನಿಗೆ ವಿರೋಧ ವಿತ್ತು. ಅದನ್ನು ಲೆಕ್ಕಿಸದ ಶಶಿಕಲಾ ಮದುವೆ ಆಗಿ ಪತಿಯ ಮನೆ ಸೇರಿದ್ದಳು. ಇದರಿಂದ ಕುಪಿತಗೊಂಡ ಮಹಾಂತೇಶ್ ಮಂಗಳವಾರ ಮಧ್ಯಾಹ್ನ ತಂಗಿ ಶಶಿಕಲಾಳ ಮನೆಗೆ ಬಂದು ಜಗಳಕ್ಕೆ ಇಳಿದಿದ್ದಾನೆ. ಕೊನೆಗೆ ಮಂಹಾತೇಶ ತಂಗಿಯ ಕಣ್ಣಿಗೆ ಖಾರದ ಪುಡಿ ಎರಚಿ, ಖಡ್ಗಯಿಂದ ಬರ್ಬರವಾಗಿ ಕೊಲೆ ಮಾಡಿದ್ದಾನೆ.
ಇನ್ನು ಆರೋಪಿ ಮಹಾಂತೇಶ ಪಟ್ಟಣದ ರಸ್ತೆಗಳಲ್ಲಿ ಕೊಲೆಗೆ ಬಳಸಿದ್ದ ಆಯುಧವನ್ನು ಹಿಡಿದುಕೊಂಡು ಪೊಲೀಸ್ ಠಾಣೆ ಕಡೆಗೆ ಹೊರಟ ದೃಶ್ಯ ಕೂ ಈಗಾಗಲೇ ವೈರಲ್ ಆಗಿದೆ. ಕೊಲೆಯ ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ನವಲಗುಂದ ಠಾಣೆ ಪೊಲೀಸರು ಬಂದಿದ್ದಾರೆ. ಸ್ಥಳೀಯರಿಂದ ಈ ಬಗ್ಗೆ ಮಾಹಿತಿ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇತ್ತ ಪತ್ನಿಯ ಕೊಲೆಯ ಸುದ್ದಿ ಕೇಳಿ ರವಿ ಮಾನಸಿಕ ಆಘಾತಕ್ಕೆ ಒಳಗಾಗಿದ್ದಾರೆ. ಅವರನ್ನು ತಾಲೂಕಾ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಒಟ್ಟಾರೆ ತನ್ನ ವಿರೋಧವನ್ನು ಲೆಕ್ಕಿಸದೇ ಮದುವೆ ಆದ ತಂಗಿಯನ್ನೇ ಕೊಂದ ಪಾಪಿ ಮಹಾಂತೇಶ ಈಗ ಪೊಲೀಸರ ಅತಿಥಿಯಾಗಿದ್ದಾನೆ.
-ವಿನೋದ ಇಚ್ಚಂಗಿ, ಪಬ್ಲಿಕ್ ನೆಕ್ಸ್ಟ್ ನವಲಗುಂದ
Kshetra Samachara
27/10/2021 11:53 am