ಧಾರವಾಡ: ಕುಂದಗೋಳ ತಾಲೂಕಿನ ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಬು.ಕೊಪ್ಪ ಗ್ರಾಮದ ಮೂವರು ರೈತರ ಜಮೀನಿನಲ್ಲಿ ಬೆಳೆದಿದ್ದ ಒಟ್ಟು 59 ಕೆಜಿ 760 ಗ್ರಾಂ ಗಾಂಜಾ ಜಪ್ತಿ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬು.ಕೊಪ್ಪ ಗ್ರಾಮದ ಮಾಲತೇಶ ಕಿತ್ತೂರ ಎಂಬುವವರ ಹೊಲದಲ್ಲಿ ಬೆಳೆದಿದ್ದ 31 ಕೆಜಿ ತೂಕದ ಹಸಿ ಗಾಂಜಾ, ರುದ್ರಪ್ಪ ಪೂಜಾರ ಎಂಬುವವರ ಹೊಲದಲ್ಲಿ ಬೆಳೆದಿದ್ದ 20 ಕೆಜಿ 160 ಗ್ರಾಂ ತೂಕದ ಹಸಿ ಗಾಂಜಾ ಹಾಗೂ ನಿಂಗಪ್ಪ ಕರಿಕೆಣ್ಣವರ ಎಂಬುವವರು ತಮ್ಮ ಹೊಲದಲ್ಲಿ ಬೆಳೆದಿದ್ದ 8 ಕೆಜಿ 5 ಗ್ರಾಂ ತೂಕದ ಹಸಿ ಗಾಂಜಾ ಸೇರಿದಂತೆ ಒಟ್ಟು 59 ಕೆಜಿ 760 ಗ್ರಾಂ ತೂಕದ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಇದರ ಒಟ್ಟು ಮೊತ್ತ 2.30 ಲಕ್ಷ ಎಂದು ಅಂದಾಜಿಸಲಾಗಿದೆ. ಇದರಲ್ಲಿ ಹಸಿ ಮತ್ತು ಒಣ ಗಾಂಜಾ ಕೂಡ ಸೇರಿದೆ. ಈಗಾಗಲೇ ಆರೋಪಿತರ ವಿರುದ್ಧ ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಮೂವರು ಆರೋಪಿತರನ್ನು ಈಗಾಗಲೇ ಬಂಧಿಸಲಾಗಿದೆ ಎಂದರು.
ಗಾಂಜಾ ಬೆಳೆಯುವುದು ಮಾರಾಟ ಮಾಡುವುದು ಮಾತ್ರ ಅಪರಾಧವಲ್ಲ. ಗಾಂಜಾ ಸೇದುವುದು ಕೂಡ ಅಪರಾಧವಾಗಿದೆ. ಈ ರೀತಿಯ ಚಟುವಟಿಕೆಗಳ ಬಗ್ಗೆ ಸಾರ್ವಜನಿಕರು ನಮ್ಮ ಗಮನಕ್ಕೆ ತಂದರೆ ನಾವು ಕ್ರಮ ಕೈಗೊಳ್ಳುತ್ತೇವೆ ಎಂದರು.
Kshetra Samachara
18/09/2021 12:55 pm