ಹುಬ್ಬಳ್ಳಿ:ಸಾಮಾನ್ಯವಾಗಿ ಅಮಾಯಕರ ಎಟಿಎಂನಿಂದ ಆನ್‌ಲೈನ್ ಮೂಲಕ ಹಣ ದೋಚುವ ಪ್ರಕರಣಗಳು ದಿನೇ ದಿನೇ ನೋಡುತ್ತಲೇ ಇದೀವಿ. ಆದರೆ ಇಲ್ಲೊಬ್ಬ ಭೂಪ ರಾಷ್ಟ್ರೀಯ ಬ್ಯಾಂಕ್ ವೊಂದರ ಮ್ಯಾನೇಜರನ್ನೇ ಯಾಮಾರಿಸೋ ಮೂಲಕ ಪ್ರತಿಷ್ಠಿತ ಕಾರ್ ಕಂಪೆನಿಯೊಂದರ ಹೆಸರು ಹೇಳಿ ಲಕ್ಷ ಲಕ್ಷ ಹಣ ಪಂಗನಾಮ ಹಾಕಿದ್ದಾನೆ.ಅದು ಹೇಗೆ ಅಂತೀರಾ ಈ ಸ್ಟೋರಿ ನೋಡಿ...
ಹೌದು ದೇಶದಲ್ಲಿ ದಿನದಿಂದ ದಿನಕ್ಕೆ ಆನ್ ಲೈನ್ ಮೂಲಕ ಖಾತೆಗೆ ಕನ್ನ ಹಾಕುವಂತಹ ಪ್ರಕರಣಗಳನ್ನು ನಾವು ನೋಡುತ್ತಲೇ ಇದ್ದೇವೆ. ಆದರೆ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಪ್ರತಿಷ್ಠಿತ ಬ್ಯಾಂಕ್ ವೊಂದರ ಮ್ಯಾನೇಜರ್ ಗೇ ಸೈಬರ್ ಖದೀಮನೊಬ್ಬ ಬರೋಬ್ಬರಿ 24 ಲಕ್ಷ ಪಂಗನಾಮ ಹಾಕಿದ್ದಾನೆ. ನಗರದ ಉಣಕಲ್ ನಲ್ಲಿರುವ ಎಸ್ ಬಿಐ ಬ್ಯಾಂಕ್ ವ್ಯವಸ್ಥಾಪಕರನ್ನೇ ಆನ್ ಲೈನ್ ವಂಚಕನೊಬ್ಬ ನಂಬಿಸಿ 24,95, 900 ರೂಪಾಯಿಗಳನ್ನು ವಂಚನೆ ಮಾಡಿದ್ದಾನೆ.
ಆರ್.ಎನ್.ಎಸ್ ಮೋಟಾರ್ಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರ ಹೆಸರಿನಲ್ಲಿ ಬ್ಯಾಂಕ್ ವ್ಯವಸ್ಥಾಪಕರಿಗೆ ಕರೆ ಮಾಡಿ ನಂಬಿಸಿರುವ ವಂಚಕ, ಬರೋಬ್ಬರಿ 24,95,900 ರೂಪಾಯಿಗಳನ್ನು ವರ್ಗಾಯಿಸಿಕೊಂಡು ಮೋಸ ಮಾಡಿದ್ದಾನೆ.
ಫೆಬ್ರುವರಿ 20ರಂದು ಬೆಳಿಗ್ಗೆ 11.30ರ ವೇಳೆ ಬ್ಯಾಂಕ್ ವ್ಯವಸ್ಥಾಪಕಿ ಮೀನಾ ಕೆ.ವಿ ಅವರಿಗೆ ಕರೆ ಮಾಡಿದ ವಂಚಕ ಆರ್.ಎನ್.ಎಸ್ ಮೋಟಾರ್ಸ್ ಕಂಪನಿಯ ವ್ಯವಸ್ಥಾಪಕ ಸುನೀಲ ಶೆಟ್ಟಿ ಎಂದು ಪರಿಚಯಿಸಿಕೊಂಡಿದ್ದಾನೆ. ಬ್ಯಾಂಕಿನ ಬಡ್ಡಿ ಮತ್ತು ಓವರ್ ಡ್ರಾಫ್ಟ್ ಸೌಲಭ್ಯದ ಬಗ್ಗೆ ಮಾತನಾಡಬೇಕಿದ್ದು, ಮಧ್ಯಾಹ್ನ 3ಕ್ಕೆ ಸಭೆಯಿದೆ, ಬ್ಯಾಂಕಿನವರು ಪಾಲ್ಗೊಳ್ಳಬೇಕೆಂದು ಹೇಳಿ ಹಣ ವರ್ಗಾಯಿಸುವ ಬಗ್ಗೆ ಮಾತನಾಡಿ ಯಾಮಾರಿಸೋಕೆ ಸ್ಕೆಚ್ ಹಾಕಿದ್ದಾನೆ.
ಗಂಟೆ ಬಳಿಕ ಮತ್ತೆ ಕರೆ ಮಾಡಿದ ವಂಚಕ, ಮಧ್ಯಾಹ್ನ 1ಗಂಟೆಗೆ ಕರೆ ಮಾಡಿ ಕೆಲಸದ ಮೇರೆಗೆ ಬೆಳಗಾವಿಗೆ ಬಂದಿದ್ದು, ವಾಟ್ಸಾಪ್ ಗೆ ಕಳುಹಿಸುವ ಗ್ರಾಹಕರ ಖಾತೆಗೆ ತುರ್ತಾಗಿ ನಮ್ಮ ಕಂಪನಿಯ ಖಾತೆಯಿಂದ ಹಣ ಆರ್ ಟಿಜಿಎಸ್ ಮಾಡಲು ಕೋರಿದ್ದಾನೆ. ಅದರಂತೆ ಬ್ಯಾಂಕ್ ವ್ಯವಸ್ಥಾಪಕರು ತರುಣ ಶರ್ಮಾ ಹೆಸರಿನ ಐಸಿಐಸಿಐ ಬ್ಯಾಂಕ್ ಖಾತೆಗೆ 985700 ರೂಪಾಯಿ ಹಾಗೂ ಉಜಾಲಾ ಗುಪ್ತಾ ಹೆಸರಿನ ಖಾತೆಗೆ 1510200 ರೂಪಾಯಿ ಹಣ ವರ್ಗಾವಣೆ ಮಾಡಿದ್ದಾರೆ. ಇದಾದ ನಂತರ ವಂಚಕ ತಿಳಿಸಿದಂತೆ ಉಣಕಲ್ ನಲ್ಲಿರುವ ಆರ್.ಎನ್.ಎಸ್ ಮೋಟಾರ್ಸಗೆ ಮಧ್ಯಾಹ್ನ 3ಕ್ಕೆ ವ್ಯವಸ್ಥಾಪಕಿ ಮೀನಾ ಸಭೆಗೆ ತೆರಳಿದಾಗ, ತಾವು ಮೋಸ ಹೋಗಿರುವುದು ಗೊತ್ತಾಗಿದೆ. ತಕ್ಷಣವೇ ಹುಬ್ಬಳ್ಳಿಯ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ನಗರದಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗುತ್ತಿರುವುದಕ್ಕೆ ಸಾರ್ವಜನಿಕರು ಪೋಲಿಸರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ ಇಷ್ಟು ದಿನ ಅಮಾಯಕ ಜನಸಾಮಾನ್ಯರನ್ನು ಟಾರ್ಗೇಟ್ ಮಾಡುವ ಮೂಲಕ ಆನ್ ಲೈನ್ ನಲ್ಲಿ ವಂಚನೆ ಮಾಡುತ್ತಿದ್ದ ಖದೀಮರು ಇದೀಗ ಬ್ಯಾಂಕ್ ಸಿಬ್ಬಂದಿಗಳಿಗೆ ಪಂಗನಾಮ ಹಾಕಲು ಮುಂದಾಗಿರುವುದು ನಿಜಕ್ಕೂ ದುರಂತವೇ ಸರಿ. ಇನ್ನಾದರೂ ಪೊಲೀಸ್ ಇಲಾಖೆ ಇಂತಹ ಸೈಬರ್ ವಂಚಕರ ಜಾಲ ಪತ್ತೆ ಹಚ್ಚಿ ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಲು ಮುಂದಾಗಬೇಕಿದೆ..
Kshetra Samachara
25/02/2021 05:52 pm