ಧಾರವಾಡ: ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ಬಿಜೆಪಿ ಕಾರ್ಯಕರ್ತನ ಮೇಲೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಮೋಹನ ಲಿಂಬಿಕಾಯಿ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ನಾಗನಗೌಡ ನೀರಲಗಿ ಪಾಟೀಲ ಎಂಬುವವರ ಮೇಲೆ ಕುಮಾರ ಪಾಟೀಲ ಎಂಬಾತ ಹಲ್ಲೆ ನಡೆಸಿದ್ದಾನೆ. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಮೋಹನ ಲಿಂಬಿಕಾಯಿ ಹಾಗೂ ನಾಗನಗೌಡ ನೀರಲಗಿ ಪಾಟೀಲ ಅವರ ಮಧ್ಯೆ ಲ್ಯಾಂಡ್ ವಿಷಯಕ್ಕೆ ಸಂಬಂಧಿಸಿದಂತೆ ವ್ಯವಹಾರ ಇತ್ತು. ಈ ವ್ಯವಹಾರವೇ ಹಲ್ಲೆಗೆ ಕಾರಣ ಎಂದು ಗೊತ್ತಾಗಿದೆ.
ಲ್ಯಾಂಡ್ ವಿಷಯಕ್ಕೆ ಸಂಬಂಧಿಸಿದಂತೆ ಇಂದು ಕುಮಾರ ಪಾಟೀಲ ನಾಗನಗೌಡ ಅವರ ಕಚೇರಿಗೆ ಮೂರು ಜನರೊಂದಿಗೆ ಬಂದಿದ್ದ. ಈ ವೇಳೆ ಮಾತುಕತೆ ನಡೆದು, ಕುಮಾರ ಪಾಟೀಲ ಕೊಡಲಿಯಿಂದ ನಾಗನಗೌಡ ಅವರ ಮೇಲೆ ಹಲ್ಲೆ ನಡೆಸಿದ್ದಾನೆ.
ಹಲ್ಲೆ ನಡೆಸುವ ವೇಳೆ ಕುಮಾರ ಪಾಟೀಲ ಮೋಹನ ಲಿಂಬಿಕಾಯಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡುತ್ತಲೇ ಇದ್ದ. ಇದಕ್ಕೆಲ್ಲ ಕಾರಣ ಮೋಹನ ಲಿಂಬಿಕಾಯಿ ಅವರೇ ಎಂದು ಹಲ್ಲೆಗೊಳಗಾದ ನಾಗನಗೌಡ ನೇರವಾಗಿ ಆರೋಪ ಮಾಡಿದ್ದಾರೆ.
ಅಲ್ಲದೇ ಈ ಘಟನೆ ಸಂಬಂಧ ದೂರು ದಾಖಲಿಸಿದರೆ ನಿಮ್ಮ ಮನೆಯವರೆಲ್ಲರನ್ನೂ ಬಿಡೋದಿಲ್ಲ ಎಂದು ಬೆದರಿಕೆ ಕೂಡ ಹಾಕಿದ್ದಾನೆ ಎಂದು ನಾಗನಗೌಡ ಆರೋಪಿಸಿದ್ದಾರೆ.
ನಾಗನಗೌಡ ಅವರ ಕಚೇರಿಗೆ ಬಂದ ಕುಮಾರ ಪಾಟೀಲ ಅಲ್ಲೇ ಇದ್ದ ಕೊಡಲಿಯಿಂದ ತಲೆಗೆ ಹೊಡೆಯಲು ಯತ್ನಿಸಿದ್ದಾರಂತೆ. ಅದನ್ನು ತಪ್ಪಿಸಿಕೊಂಡ ನಾಗನಗೌಡ ಅವರ ಕೈಗೆ ಪೆಟ್ಟಾಗಿದೆ. ಸದ್ಯ ಅವರನ್ನು ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದ್ದು, ವಿದ್ಯಾಗಿರಿ ಠಾಣೆಯಲ್ಲಿ ದೂರು ದಾಖಲಿಸಲಾಗುವುದು ಎಂದು ನಾಗನಗೌಡ ತಿಳಿಸಿದ್ದಾರೆ.
ಹಲ್ಲೆಗೊಳಗಾದ ನಾಗನಗೌಡ ಬಿಜೆಪಿ ಕಾರ್ಯಕರ್ತ. ಹಲ್ಲೆ ಮಾಡಿದ ಕುಮಾರ ಪಾಟೀಲ ಕೂಡ ನವಲಗುಂದ ತಾಲೂಕಿನ ಬಿಜೆಪಿ ಉಪಾಧ್ಯಕ್ಷರಾಗಿದ್ದಾರೆ. ಇನ್ನು ಈ ಘಟನೆಗೆ ಕಾರಣೀಕರ್ತರಾಗಿದ್ದಾರೆನ್ನಲಾದ ಮೋಹನ ಲಿಂಬಿಕಾಯಿ ಅವರು ಕೂಡ ಬಿಜೆಪಿ ಮುಖಂಡರಾಗಿದ್ದಾರೆ.
Kshetra Samachara
11/01/2021 05:29 pm