ಹುಬ್ಬಳ್ಳಿ: ಮನೆಯಲ್ಲಿದ್ದ ಒಂಟಿ ಮಹಿಳೆಯ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಚಾಕುವಿನಿಂದ ಕುತ್ತಿಗೆಗೆ ಇರಿದು ಕೊಲೆಗೆ ಯತ್ನಿಸಿದ ಪರಿಣಾಮ, ಗಂಭೀರವಾಗಿ ಗಾಯಗೊಂಡ ಮಹಿಳೆಯನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ ಘಟನೆ ಇಂದು ಮುಂಜಾನೆ ನಡೆದಿದೆ.
ಬಾಗಲಕೋಟೆ ತಾಲ್ಲೂಕಿನ ಬೀಳಗಿ ಗ್ರಾಮದ ಯಡ್ಡುರು ಗ್ರಾಮದ ಉಮಾಶ್ರೀ ಎಂಬ ಮಹಿಳೆ ಮನೆಯಲ್ಲಿ ಒಂಟಿಯಾಗಿ ಮಲಗಿದ್ದ ವೇಳೆಯಲ್ಲಿ, ಇಂದು ಬೆಳಗಿನ ಜಾವ ಅಪರಿಚಿತ ವ್ಯಕ್ತಿ ಬಂದು ಮನೆಯ ಬಾಗಿಲನ್ನು ಬಡಿದಿದ್ದಾನೆ. ಮನೆಯ ಅಕ್ಕ ಪಕ್ಕದವರು ಬಂದಿರಬಹುದು ಎಂದು ಉಮಾಶ್ರೀ ಬಾಗಿಲನ್ನು ತೆಗೆದಾಗ ಅಪರಿಚಿತ ವ್ಯಕ್ತಿ ಏಕಾಏಕಿ ಉಮಾಶ್ರೀ ಕುತ್ತಿಗೆಗೆ ಚಾಕು ಇರಿದು ಪರಾರಿಯಾಗಿದ್ದಾನೆ.
ಗಂಭೀರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಸಹಾಯಕ್ಕಾಗಿ ಕೂಗುತ್ತಾ ಬಿದ್ದಿದ್ದ ಉಮಾಶ್ರೀಯನ್ನು ಮನೆಯ ಅಕ್ಕ-ಪಕ್ಕದವರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಮಹಿಳೆಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದ ಕಾರಣ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆಯ ಕುರಿತು ಹುಬ್ಬಳ್ಳಿಯ ವಿದ್ಯಾನಗರ ಠಾಣೆಯ ಪೊಲೀಸರು ಬಾಗಲಕೋಟೆ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ.
ವಿನಯ ರೆಡ್ಡಿ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ
Kshetra Samachara
02/09/2022 01:35 pm