ಹುಬ್ಬಳ್ಳಿ: ಸರಳ ವಾಸ್ತುತಜ್ಞ ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣ ಬಗೆದಷ್ಟು ಬಯಲಾಗುತ್ತಿದೆ. ಹಂತಕರಾದ ಮಹಾಂತೇಶ ಶಿರೂರ ಹಾಗೂ ಮಂಜುನಾಥನ ಮನೆಗಳಲ್ಲಿ ಪೊಲೀಸರು ವಿವಿಧ ದಾಖಲೆಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಕೊಲೆಗಡುಕರ ಮಹಾ ಸಂಚಿನ ಗುಟ್ಟಿಗೆ ತನಿಖಾಧಿಕಾರಿಗಳೇ ಬೆವರುವಂತಾಗಿದೆ.
ಬಗೆದಷ್ಟು ಬಯಲಾಗುತ್ತಿದೆ ಹಂತಕರ ಮಹಾ ಸಂಚು. ಕಳೆದ ಐದರಂದು ಹುಬ್ಬಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ನಡೆದ ವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣ ಚುರುಕುಗೊಂಡಿದೆ. ಪೊಲೀಸ್ ಕಸ್ಟಡಿಯಲ್ಲಿರುವ ಹಂತಕರು ಹೊಸ ಹೊಸ ವಿಷಯಗಳ ತುಟಿ ಬಿಚ್ಚುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಆರ್ಥಿಕ ಹಿಂದುಳಿದ ನಿರುದ್ಯೋಗಿಗಳಿಗೆ ಉದ್ಯೋಗ ನೀಡಬೇಕು. ಅದರಲ್ಲೂ ಉತ್ತರ ಕರ್ನಾಟಕದವರಿಗೆ, ಗ್ರಾಮೀಣರಿಗೆ ಸರಳ ವಾಸ್ತು ಸಂಸ್ಥೆಯಲ್ಲಿ ಉದ್ಯೋಗ ನೀಡಬೇಕು ಮಹದಾಸೆಯ ಒಳಗಣ್ಣಿಗೆ ಬಿದ್ದವರೇ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಧುಮ್ಮವಾಡ ಗ್ರಾಮದ ಮಹಾಂತೇಶ ಶಿರೂರು ಹಾಗೂ ಧಾರವಾಡ ತಾಲೂಕಿನ ದೇವಗಿರಿ ಗ್ರಾಮದ ಮಂಜುನಾಥ ಮರೇವಾಡ.
ಸರಳ ವಾಸ್ತು ಸಂಸ್ಥೆಯಲ್ಲಿ ಉದ್ಯೋಗ ಗಿಟ್ಟಿಸಿಕೊಂಡ ಮಹಾಂತೇಶ ಸಂಸ್ಥೆಗೆ ದಿನದಿಂದಲೂ ಚಂದ್ರಶೇಖರ ಗುರೂಜಿ ಅವರ ಸ್ವಭಾವ, ವ್ಯಕ್ತಿತ್ವ, ದೌರ್ಬಲ್ಯಗಳನ್ನೆಲ್ಲ ಸೂಕ್ಷ್ಮವಾಗಿ ಗ್ರಹಿಸಿ, ಅತ್ಯಂತ ಕಡಿಮೆ ಅವಧಿಯಲ್ಲಿಯೇ ಗುರೂಜಿಗೆ ಅತ್ಯಾಪ್ತನಾದ. ಬಡತನದಿಂದ ಕುಟುಂಬಕ್ಕೆ ನಾನೇ ಆಧಾರ ಸ್ತಂಭ, ನಿಮ್ಮನೇ ನಂಬಿದ್ದೇನೆ ಎಂಬಿತ್ಯಾದಿ ನಾಟಕೀಯ ಮಾತುಗಳ ಮೂಲಕ ಗುರೂಜಿ ಮನಗೆದ್ದು, ಪರಿವಾರದ ಉಪಾಧ್ಯಕ್ಷ ಹುದ್ದೆ ಗಿಟ್ಟಿಸಿಕೊಂಡ ಮಹಾಂತೇಶ್. ಗುರೂಜಿ ಹುಬ್ಬಳ್ಳಿಗೆ ಬಂದಾಗ ತನ್ನೂರು ಧುಮ್ಮವಾಡಕ್ಕೆ ಕರೆದೊಯ್ದು ಕುಟುಂಬದ ಆರ್ಥಿಕ ಸ್ಥಿತಿ-ಗತಿಗಳನ್ನು ವಿವರಿಸಿ, ಮುಗ್ಧತೆಯ ನಾಟಕವಾಡಿ, ಆರ್ಥಿಕ ಸಹಾಯ ಪಡೆದಿದ್ದ. ಮಹಾಂತೇಶ ಶಿರೂರನ ಸಂಚಿನ ಮರ್ಮ ಅರಿಯದ ಗುರೂಜಿ, ಮಹಾಂತೇಶನನ್ನು ನಂಬಿದ್ದರು. ಇದೇ ನಂಬಿಕೆಗೆ ದ್ರೋಹ ಬಗೆದಿದ್ದಾರೆ ಮಹಾಂತೇಶ ಮತ್ತು ಮಂಜುನಾಥ.
ಇತ್ತ ಕೇಂದ್ರ ಸರಕಾರ, 2016ರಲ್ಲಿನ ನೋಟ್ ಬ್ಯಾನ್ ಮಾಡಿತ್ತು. ಇದರಿಂದ ಸಿಜಿ ಪರಿವಾರಕ್ಕೆ ದೊಡ್ಡ ಪ್ರಮಾಣದಲ್ಲಿ ಆರ್ಥಿಕ ಹೊಡೆತ ಬಿದ್ದಿತ್ತು. ಬಳಿಕ 2019ರಿಂದ ಎರಡು ವರ್ಷ ಕೊರೊನಾ ಸಾಕಷ್ಟು ತೊಂದರೆ ನೀಡಿತ್ತು. ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಗುರೂಜಿ, ಮಹಾಂತೇಶ ಹೆಸರಿನಲ್ಲಿದ್ದ ಜಮೀನು, ನಿವೇಶನಗಳನ್ನು ಮಾರಾಟ ಮಾಡಲು ಮುಂದಾಗಿದ್ದರು. ಸರಳ ಗುರುವಿನ ಸಹಸ್ರ ಸಾಮ್ರಾಜ್ಯದ ಆಳ-ಅಗಲ ಬಲ್ಲವನಾಗಿದ್ದ ಮಹಾಂತೇಶ, ಗುರೂಜಿಗೆ ಆಸ್ತಿ ಬಿಟ್ಟುಕೊಡಲು ಸಿದ್ಧನಿರಲಿಲ್ಲ. ಇದೇ ಕಾರಣಕ್ಕೆ ಗುರೂಜಿ ಹಾಗೂ ಮಹಾಂತೇಶ ನಡುವೆ ಸಾಕಷ್ಟು ಬಾರಿ ಸಣ್ಣಪುಟ್ಟ ಕಲಹಗಳಾಗಿದ್ದವು ಎಂಬುದು ಪೊಲೀಸ್ ತನಿಖೆಯಿಂದ ಹೊರಬಂದಿದೆ. ಇನ್ನೂ ಹುಬ್ಬಳ್ಳಿಯ ಗೋಕುಲ ರಸ್ತೆಯ ಗುರೂಜಿ ಅಪಾರ್ಟ್‌ಮೆಂಟ್‌ನಲ್ಲಿರುವ ಮಹಾಂತೇಶನ ನಿವಾಸ ಹಾಗೂ ಧಾರವಾಡದಲ್ಲಿರುವ ಮಂಜುನಾಥನ ಮನೆಯಲ್ಲಿ ವಿದ್ಯಾನಗರ ಪೊಲೀಸರು ನ್ಯಾಯಾಲಯದ ಅನುಮತಿ ಮೇರೆಗೆ ಹುಡುಕಾಡಿದ್ದಾರೆ. ಈ ವೇಳೆ ಅವರ ಕುಟುಂಬದವರು ಸಹಕರಿಸಿದ್ದಾರೆ, ಆದ್ರೆ ಅಗತ್ಯ ದಾಖಲೆಗಳು ಮಾತ್ರ ಲಭ್ಯವಾಗಿಲ್ಲ ಎನ್ನಲಾಗಿದೆ..
ಇನ್ನೂ ಎರಡೂ ದಿನಗಳ ಕಾಲ ಹಂತಕರು ಪೊಲೀಸ್ ಕಸ್ಟಡಿಯಲ್ಲಿರ್ತಾರೆ. ಖಾಕಿ ಪಡೆ ಎಲ್ಲ ಮಗ್ಗುಲುಗಳಿಂದ ತನಖೆ ನಡೆಸಿದೆ. ಆದರೆ ಇಷ್ಟೊಂದು ಕ್ರೂರವಾಗಿ ಕೊಲೆ ಮಾಡಲು ಪ್ರಮುಖ ಕಾರಣವೇನು? ಎಂಬುದು ಮಾತ್ರ ಹೊರಬರುತ್ತಿಲ್ಲ. ಹತ್ಯೆಗೆ ಹೆಣ್ಣು ಕಾರಣ ಎಂದು ಹುಬ್ಬಳ್ಳಿಯ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಇದು ಎಷ್ಟು ಸತ್ಯ ಎಂಬುದು ಮಾತ್ರ ಪೊಲೀಸ್ ತನಿಖೆಯಿಂದ ಹೊರಬರಬೇಕಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
09/07/2022 04:49 pm