ಹುಬ್ಬಳ್ಳಿ: ಹಳೆ ಹುಬ್ಬಳ್ಳಿಯ ಗಲಭೆ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆಯುತಿದ್ದು, ಕಳೆದ ಐದು ದಿನಗಳಿಂದ ತಲೆ ಮರೆಸಿಕೊಂಡಿದ್ದ, ಗಲಭೆಗೆ ತುಪ್ಪ ಸುರಿದ ಮೌಲ್ವಿ ವಸೀಮ್ ಪಠಾಣ್ 4 ನಿಮಿಷದ ವೀಡಿಯೋ ಹರಿಬಿಡುವ ಮೂಲಕ ಸಮರ್ಥನೆಗೆ ಮುಂದಾಗಿದ್ದ. ಆದರೆ ವೀಡಿಯೋ ಜಾಲವನ್ನು ಬೆನ್ನು ಹತ್ತಿದ್ದ ಪೊಲೀಸರು ನಾಲ್ಕೈದು ಗಂಟೆಯಲ್ಲಿಯೇ ಮಾಸ್ಟರ್ ಮೈಂಡ್ ಕೈಗೆ ಕೋಳ ತೊಡಿಸಿದ್ದಾರೆ.
ಏಕಾಏಕಿ ಪೊಲೀಸ್ ವಾಹನ ಏರುವ ಮೂಲಕ ಉದ್ರಿಕ್ತರನ್ನು ಪ್ರಚೋದಿಸಿ ಉರಿಯೊ ಬೆಂಕಿಗೆ ತುಪ್ಪ ಸುರಿದ್ದಿದ್ದ ಮೌಲ್ವಿ ವಸೀಮ್ ಪಠಾಣ ಶೋಧಕ್ಕಾಗಿ ಪೊಲೀಸರು ಹಗಲಿರುಳು ಓಡಾಡುತ್ತಿದ್ದರು. ಇತ್ತ ಸ್ವತಃ ವಸೀಮ್ ಪಠಾಣ ವೀಡಿಯೋ ಹರಿಬಿಡುವ ಮೂಲಕ ಸಮರ್ಥನೆಗೆ ಮುಂದಾಗಿದ್ದಾನೆ. ವೀಡಿಯೋ ಉದ್ದಕ್ಕೂ ತನ್ನ ಬಗ್ಗೆ ಸಮಜಾಯಿಷಿ ನೀಡಿದ್ದ ಭೂಪ, ನಾನು ಸಮಾಜದ ಸ್ವಾಸ್ಥ್ಯ ಹಾಳು ಮಾಡದೇ, ಉದ್ರಿಕ್ತರನ್ನು ಸಮಾಧಾನ ಮಾಡುವುದಕ್ಕೆ ಮುಂದಾಗಿದ್ದೆ. ಬಳಿಕ ಇದ್ದಕ್ಕಿಂದ್ದಂತೆ ಕತ್ತಲಾವರಿಸಿತ್ತು. ಬಳಿಕ ಮುಖಕ್ಕೆ ಕಪ್ಪುಬಟ್ಟೆ ಕಟ್ಟಿಕೊಂಡ ಕೆಲವರು ಪ್ರತ್ಯಕ್ಷವಾಗಿದ್ದರು. ಸದ್ಯ ನನಗೆ ಜೀವ ಭಯವಿದ್ದು, ಆದಷ್ಟು ಬೇಗ ಪೊಲೀಸರ ಮುಂದೆ ಶರಣಾಗುವುದಾಗಿ ವೀಡಿಯೋದಲ್ಲಿ ಹೇಳಿಕೊಂಡಿದ್ದಾನೆ. ಆದರೆ ಇಷ್ಟು ಹೇಳಿದ್ದೆ ತಡ ಕಾರ್ಯ ಪ್ರವೃತ್ತರಾದ ಪೊಲೀಸರು ಹೆಡೆಮುರಿ ಕಟ್ಟಿಕೊಂಡು ಹುಬ್ಬಳ್ಳಿಗೆ ಕರೆದುಕೊಂಡು ಬಂದಿದ್ದಾರೆ.
ಇನ್ನೂ ಕೆಲ ದಿನಗಳ ಹಿಂದಷ್ಟೆ ನಡೆದಿದ್ದ ರಾಮನವಮಿ ಮೆರವಣಿಗೆ ವೇಳೆ ಹುಬ್ಬಳ್ಳಿಯ ಪೆಂಡಾರಗಲ್ಲಿಯ ಮಸೀದಿ ಮೇಲೆ ಜೈ ಶ್ರೀರಾಮ ಎಂದು ಲೇಜರ್ ಲೈಟ್ ಬಿಡಲಾಗಿತ್ತು. ಇದೇ ಘಟನೆ ವಿವಾದಕ್ಕೆ ಕಾರಣವಾಯ್ತಾ ಅನ್ನೊ ಅನುಮಾನ ಪೊಲೀಸರನ್ನು ಕಾಡುತ್ತಿದೆ. ಈ ವೀಡಿಯೋದಿಂದಲೇ ರೊಚ್ಚಿಗೆದ್ದಿದ್ದ ಮುಸ್ಲಿಂ ಪುಂಡರು, ಅಭಿಷೇಕ ಹಿರೇಮಠ ಹಾಕಿದ ಪೋಸ್ಟ್ ನಿಂದ ಮತ್ತಷ್ಟು ರೊಚ್ಚಿಗೆದ್ದೆ ಗಲಭೆ ಮಾಡಿದ್ದಾರೆ. ಏತನ್ಮಧ್ಯೆ ಗಲಭೆಯಲ್ಲಿ ಹಾನಿಗೀಡಾಗಿದ್ದ ದಿಡ್ಡಿ ಹನುಮಂತ ದೇವಸ್ಥಾನ ಮತ್ತು ಸಂಜೀವಿನಿ ಆಸ್ಪತ್ರೆಗೆ ರಾಜ್ಯ ಅಲ್ಪ ಸಂಖ್ಯಾತ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಮ್ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ರು.
ಇದರ ನಡುವೆಯೇ ಗಲಭೆಗೆ ಪ್ರಚೋದನೆ ನೀಡಿದವರಲ್ಲಿ ಒಬ್ಬನಾದ AIMIM ಮುಖಂಡ ಮೊಹಮ್ಮದ ಆರೀಫ್ ನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಭಿಷೇಕ್ ಹಿರೇಮಠ ಪರ ಮಧ್ಯಂತರ ಜಾಮೀನು ತಿರಸ್ಕೃತಗೊಂಡಿದ್ದು, ನಾಳೆ ನಡೆಯಲಿರುವ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ಹುಬ್ಬಳ್ಳಿ 4 ನೇ ಹೆಚ್ವುವರಿ ನ್ಯಾಯಾಲಯ ಅನುವು ಮಾಡಿಕೊಟ್ಟಿದೆ. ಪರೀಕ್ಷೆ ಮುಗಿಯುವವರೆಗೆ ಜೈಲಿನಿಂದ ಪರೀಕ್ಷಾ ಕೇಂದ್ರಕ್ಕೆ ಕರೆತರುವ ಜವಾಬ್ದಾರಿ ಹಳೆ ಹುಬ್ಬಳ್ಳಿ ಪೊಲೀಸರ ಹೆಗಲಿಗೆ ಬಿದ್ದಿದೆ.
ಒಟ್ಟಾರೆಯಾಗಿ ಗಲಭೆಗೆ ಸಂಬಂಧಿಸಿದಂತೆ ಈವರೆಗೆ 126 ಪುಂಡರನ್ನು ಬಂಧಿಸಿರುವ ಪೊಲೀಸರು ಕಿಂಗ್ ಪಿನ್ ವಸೀಮ್ ಪಠಾಣಗಾಗಿ ತೀವೃ ಶೋಧ ಮುಂದುವರೆಸಿದ್ದಾರೆ. ಅಲ್ಲದೆ, ನಾಳೆ ಅಭಿಷೇಕ ಪರೀಕ್ಷೆ ಬರೆಯಲಿರುವ ಮಹೇಶ ಪಿಯೂ ಕಾಲೇಜು ಸುತ್ತ ಮುತ್ತ ಬಿಗಿ ಭದ್ರತೆ ಒದಗಿಸಿದ್ದಾರೆ. ಗಂಟೆ ಗಂಟೆಗೊಮ್ಮೆ ಆರೋಪಿಗಳನ್ನು ಬಂಧಿಸಿ ತರುತ್ತಿರುವ ಪೊಲೀಸರು ನಾಳೆಯೂ ಬೇಟೆಯನ್ನು ಮುಂದುವರೆಸಲಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
21/04/2022 06:49 pm