ಧಾರವಾಡ: ಪ್ರವಾಹ ಪೀಡಿತ ಬಡವರಿಗೆ ನಿವೇಶನ ಹಂಚಿಕೆ ಮಾಡುವಲ್ಲಿ ನವಲಗುಂದ ತಹಶೀಲ್ದಾರ ನವೀನ್ ಹುಲ್ಲೂರ ಅವರು ಭ್ರಷ್ಟಾಚಾರ ಎಸಗಿದ್ದಾರೆ ಎಂದು ಆರೋಪಿಸಿ ನವಲಗುಂದ ತಾಲೂಕಿನ ಬಸಾಪುರ ಗ್ರಾಮದ ಕೆಲ ಗ್ರಾಮಸ್ಥರು ಇದೀಗ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.
2009-10ನೇ ಸಾಲಿನಲ್ಲಿ ಪ್ರವಾಹ ಉಂಟಾಗಿದ್ದರಿಂದ ಬಸಾಪುರ ಗ್ರಾಮವನ್ನು ಬೇರೆಡೆ ಸ್ಥಳಾಂತರ ಮಾಡಲಾಗಿದೆ. ಪ್ರವಾಹ ಪೀಡಿತ ಜಾಗ ಬಿಟ್ಟು ಬೇರೆಡೆ 370 ಮನೆಗಳನ್ನು ನಿರ್ಮಿಸಲಾಗಿತ್ತು. ಆ ಮನೆಗಳನ್ನು ಹಂಚಿಕೆ ಕೂಡ ಮಾಡಲಾಗಿದೆ. ಆದರೆ, 250 ಖಾಲಿ ನಿವೇಶನಗಳ ಹಂಚಿಕೆಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದ್ದು, ಅರ್ಹರಿಗೆ ಆ ಖಾಲಿ ನಿವೇಶನಗಳನ್ನು ಹಂಚಿಕೆ ಮಾಡದೇ ದುಡ್ಡು ಕೊಟ್ಟವರಿಗೆ ಮಾತ್ರ ತಹಶೀಲ್ದಾರ ನವೀನ್ ಹುಲ್ಲೂರ ಅವರು ಅವುಗಳನ್ನು ಹಂಚಿಕೆ ಮಾಡಿದ್ದಾರೆ ಎಂಬ ಆರೋಪವನ್ನು ಗ್ರಾಮಸ್ಥರು ಮಾಡಿದ್ದು, ಈ ಸಂಬಂಧ ತನಿಖೆ ನಡೆಸುವಂತೆ ಬಸಾಪುರ ಗ್ರಾಮದ ಯುವಕ ಗಂಗಾಧರ ತೊರವಿ ಎಂಬುವವರು 2021ರಲ್ಲೇ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಆದರೆ, ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಇದೀಗ ನಿವೇಶನ ವಂಚಿತ ಜನ ಮತ್ತೊಂದು ಬಾರಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.
2009ರಿಂದ ಇಲ್ಲಿಯವರೆಗೂ ಅರ್ಹ ಫಲಾನುಭವಿಗಳಿಗೆ ನಿವೇಶನಗಳೇ ಸಿಕ್ಕಿಲ್ಲ. ಹಕ್ಕುಪತ್ರ ನೀಡಿದ್ದರೂ ಅವರಿಗೆ ನಿವೇಶನಗಳು ಸಿಕ್ಕಿಲ್ಲ. ಯಾರು ದುಡ್ಡು ಕೊಟ್ಟಿದ್ದಾರೋ ಅಂತವರಿಗೆ ಮಾತ್ರ ಅವುಗಳನ್ನು ಹಂಚಿಕೆ ಮಾಡಿದ್ದಾರೆ. ಅಲ್ಲದೇ ಬಸಾಪುರ ಗ್ರಾಮದಲ್ಲಿರುವ ಹಲವಾರು ಸರ್ಕಾರಿ ಜಾಗಗಳನ್ನೂ ತಹಶೀಲ್ದಾರರು ಮಾರಾಟ ಮಾಡಿದ್ದಾರೆ ಎಂಬ ಆರೋಪವನ್ನು ಸಹ ಬಸಾಪುರ ಗ್ರಾಮಸ್ಥರು ಮಾಡಿದ್ದಾರೆ.
ಮೊನ್ನೆಯಷ್ಟೇ ತಹಶೀಲ್ದಾರರು ಪೊಲೀಸ್ ಬಂದೋಬಸ್ತ್ ಮಧ್ಯೆ ಬಂದು ಯಾರು ದುಡ್ಡು ಕೊಟ್ಟು ಖುಲ್ಲಾ ಜಾಗಗಳನ್ನು ಪಡೆದಿದ್ದಾರೋ ಅವುಗಳನ್ನು ಅಳತೆ ಮಾಡಿಸಿಕೊಂಡು ಹೋಗಿದ್ದಾರೆ. ಅರ್ಹ ಫಲಾನುಭವಿಗಳಿಗೆ ಸಿಗಬೇಕಾದ ಖಾಲಿ ನಿವೇಶನಗಳು ಉಳ್ಳವರ ಪಾಲಾಗಿದ್ದು, ಬಡವರು ಇದೀಗ ಬಾಡಿಗೆ ಮನೆಯಲ್ಲಿ ವಾಸಿಸುವಂತಾಗಿದೆ. 2021ರಲ್ಲೇ ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಮತ್ತೊಮ್ಮೆ ಲೋಕಾಯುಕ್ತ ಕಚೇರಿ ಮೆಟ್ಟಿಲೇರಿದ್ದೇವೆ ಎಂದು ಗ್ರಾಮಸ್ಥರು ತಿಳಿಸಿದ್ದು, ಲೋಕಾಯುಕ್ತ ಪೊಲೀಸರು ಈ ಪ್ರಕರಣವನ್ನು ಹೇಗೆ ಪರಿಗಣಿಸುತ್ತಾರೋ ಕಾದು ನೋಡಬೇಕಿದೆ.
Kshetra Samachara
04/03/2022 11:05 pm