ಧಾರವಾಡ: ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪಿಗೆ ಧಾರವಾಡದ ಎರಡನೇ ಅಧಿಕ ಜಿಲ್ಲಾ ಸತ್ರ ಮತ್ತು ವಿಶೇಷ ನ್ಯಾಯಾಲಯವು 10 ವರ್ಷ ಜೈಲು ಶಿಕ್ಷೆ ಹಾಗೂ ಒಟ್ಟು 55 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದೆ.
ಸೈಯ್ಯದ್ ಸಾಜೀದ್ ಹುಸೇನ್ ಸುಲೇದಾರ್ ಎಂಬಾತನೇ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪಿಯಾಗಿದ್ದ. ಇಂದು ಅವನ ಮೇಲಿದ್ದ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.
ಕಲಂ 366 ಐಪಿಸಿ ಪ್ರಕಾರ 7 ವರ್ಷ ಕಠಿಣ ಶಿಕ್ಷೆ ಮತ್ತು 10 ಸಾವಿರ ದಂಡ, ಕಲಂ 376 ಐಪಿಸಿ ಪ್ರಕಾರ 10 ವರ್ಷ ಕಠಿಣ ಶಿಕ್ಷೆ ಮತ್ತು 20 ಸಾವಿರ ದಂಡ, ಕಲಂ 6 ಪೋಕ್ಸೋ ಕಾಯ್ದೆ ಪ್ರಕಾರ 10 ವರ್ಷ ಕಠಿಣ ಶಿಕ್ಷೆ ಮತ್ತು 20 ಸಾವಿರ ದಂಡ, ಕಲಂ 343 ಐಪಿಸಿ ಪ್ರಕಾರ 1 ವರ್ಷ ಸಾದಾ ಶಿಕ್ಷೆ ಮತ್ತು 2.500 ದಂಡ, ಕಲಂ 506 ಐಪಿಸಿ ಪ್ರಕಾರ 1 ವರ್ಷ ಸಾದಾ ಶಿಕ್ಷೆ ಮತ್ತು 2.500 ದಂಡ ವಿಧಿಸಿ ಆದೇಶ ಹೊರಡಿಸಿದ್ದು, ಎಲ್ಲಾ ಶಿಕ್ಷೆಯನ್ನು ಏಕ ಕಾಲಕ್ಕೆ ಜಾರಿಗೊಳಿಸಿ ಮತ್ತು ಒಟ್ಟು ದಂಡದ ಮೊತ್ತ 55 ಸಾವಿರ ರೂಪಾಯಿಗಳಲ್ಲಿ 50 ಸಾವಿರ ರೂಪಾಯಿಗಳನ್ನು ನೊಂದ ಬಾಲಕಿಗೆ ಮತ್ತು ಉಳಿದ 5 ಸಾವಿರ ರೂಪಾಯಿಗಳನ್ನು ಸರ್ಕಾರಕ್ಕೆ ಕಟ್ಟಬೇಕು ಎಂದು ನ್ಯಾಯಾಲಯ ಆದೇಶಿಸಿದೆ.
ಈ ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕರಾದ ಗಿರಿಜಾ ತಮ್ಮಿನಾಳ ಅವರು ಸರ್ಕಾರದ ಪರವಾಗಿ ವಾದ ಮಂಡನೆ ಮಾಡಿದ್ದರು. 2018ರಲ್ಲಿ ಅಂದಿನ ಧಾರವಾಡ ಉಪನಗರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಆಗಿದ್ದ ಮೋತಿಲಾಲ್ ಪವಾರ ಅವರು ಆರೋಪಿತನ ವಿರುದ್ದ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಧಾರವಾಡ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪಿ.ಯು. ಕಾಲೇಜಿನ ವಿದ್ಯಾರ್ಥಿನಿಯನ್ನು ಅಪರಾಧಿ ಸೈಯ್ಯದ್ ಸಾಜೀದಹುಸೇನ್ ಸುಲೇದಾರ 21-08-2018 ರ ಸಂಜೆ 7.30ರ ಸುಮಾರಿಗೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಅಪಹರಿಸಿಕೊಂಡು ಹೋಗಿದ್ದ. ಧಾರವಾಡದ ಲಾಡ್ಜವೊಂದರಲ್ಲಿ ಅಕ್ರಮ ಬಂಧನದಲ್ಲಿಟ್ಟು ಅವಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ನಂತರ ದಿನಾಂಕ 22-08-2018 ರಂದು ತನ್ನೊಂದಿಗೆ ಬರದಿದ್ದರೆ ನೊಂದ ಬಾಲಕಿಗೆ ಮತ್ತು ಅವಳ ತಂದೆ, ತಾಯಿಗೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಧಾರವಾಡದಿಂದ ಬೆಂಗಳೂರಿಗೆ ಅಪಹರಿಸಿಕೊಂಡು ಹೋಗಿದ್ದ. ಬೆಂಗಳೂರಿನಲ್ಲಿ ಆರೋಪಿ ವಾಸ ಇರುವ ಬಾಡಿಗೆ ಮನೆಯಲ್ಲಿ ದಿನಾಂಕ 23-08-2018 ರಿಂದ ದಿನಾಂಕ 27-08-2018 ರವರೆಗೆ ಅಕ್ರಮ ಬಂಧನದಲ್ಲಿರಿಸಿ ಜೀವ ಬೆದರಿಕೆ ಹಾಕಿ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದರ ಕುರಿತು ಸಾಕ್ಷ್ಯ ಸಂಗ್ರಹಿಸಿ ಅಂದಿನ ಇನ್ಸ್‌ಪೆಕ್ಟರ್ ಮೋತಿಲಾಲ್ ಪವಾರ ಅವರು ನ್ಯಾಯಾಲಯದ ಮುಂದೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
Kshetra Samachara
09/11/2021 09:37 pm