ಧಾರವಾಡ ನಗರವನ್ನು ವಿದ್ಯಾಕಾಶಿ ಎಂದು ಕರೆಯುತ್ತಾರೆ. ಸಹಜವಾಗಿಯೇ ಇಲ್ಲಿ ಶಿಕ್ಷಣ ಸಂಸ್ಥೆಗಳು ಹೆಚ್ಚಾಗಿವೆ. ವಿದ್ಯಾಕಾಶಿ ಎಂದು ಹೆಸರಿರುವ ಧಾರವಾಡಕ್ಕೆ ಕಳಂಕ ಅಂಟಿಸುವ ಕೆಲಸವೊಂದು ನಡೆದಿದೆ.
ಹೌದು! ಧಾರವಾಡದ ಮಹಾನ್ ವ್ಯಕ್ತಿಯ ಹೆಸರಿಟ್ಟುಕೊಂಡಿರುವ ಕಾಲೇಜೊಂದರಲ್ಲಿ ವಿದ್ಯಾರ್ಥಿನಿ ಮೇಲೆ ಕಾಲೇಜು ಅಧ್ಯಕ್ಷನೇ ಲೈಂಗಿಕ ದೌರ್ಜನ್ಯ ನಡೆಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಧಾರವಾಡದ ಉಪನಗರ ಠಾಣೆಯಲ್ಲಿ ದೂರು ಸಹ ದಾಖಲಾಗಿದೆ.
ಧಾರವಾಡದ ವಿಶ್ವೇಶ್ವರಯ್ಯ ಪದವಿಪೂರ್ವ ವಿಜ್ಞಾನ ಕಾಲೇಜಿನ ಅಧ್ಯಕ್ಷ ಬಸವರಾಜ ಯಡವಣ್ಣವರ ಎಂಬಾತನೇ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದವನು. ಅಲ್ಲದೇ ಕಾಲೇಜಿನ ಪ್ರಾಚಾರ್ಯ ಮಹಾದೇವ ಕುರುವತ್ತಿಗೌಡರ ಇದಕ್ಕೆ ಪ್ರಚೋದನೆ ನೀಡುತ್ತಿದ್ದ ಎಂಬುದು ಗೊತ್ತಾಗಿದೆ.
ಈ ಸಂಬಂಧ ವಿದ್ಯಾರ್ಥಿನಿಯೋರ್ವಳು ದೂರು ದಾಖಲಿಸಿದ್ದು, ಪ್ರಾಚಾರ್ಯ ಕುರುವತ್ತಿಗೌಡರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಪರಾರಿಯಾಗಿರುವ ಕಾಲೇಜು ಅಧ್ಯಕ್ಷ ಬಸವರಾಜ ಯಡವಣ್ಣವರಗಾಗಿ ಶೋಧ ನಡೆದಿದೆ.
ಪ್ರತಿದಿನ ರಾತ್ರಿ 12ರ ವರೆಗೂ ಬಸವರಾಜ, ವಿದ್ಯಾರ್ಥಿನಿಯರ ಹಾಸ್ಟೆಲ್ನಲ್ಲಿ ಇರುತ್ತಿದ್ದ. ಅಲ್ಲದೇ ದೇವಸ್ಥಾನಕ್ಕೆ ಎಂದು ಹೇಳಿ ಗೋವಾ, ದಾಂಡೇಲಿಗೆ ಕರೆದುಕೊಂಡು ಹೋಗಿ ಅಲ್ಲಿ ವಿದ್ಯಾರ್ಥಿನಿಗೆ ಒತ್ತಾಯಪೂರ್ವಕವಾಗಿ ಬಿಯರ್ ಕುಡಿಸಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಇದಕ್ಕೆ ಪ್ರಾಚಾರ್ಯ ಕುರುವತ್ತಿಗೌಡರ ಕೂಡ ಪ್ರಚೋದನೆ ನೀಡುತ್ತಿದ್ದ ಎಂಬುದು ಗೊತ್ತಾಗಿದೆ. ಹೀಗಾಗಿ ಇಬ್ಬರ ಮೇಲೂ ದೂರು ದಾಖಲಾಗಿದೆ. ನಿನ್ನೆ ಎಬಿವಿಪಿ ಕಾರ್ಯಕರ್ತರೂ ಕಾಲೇಜಿಗೆ ಭೇಟಿ ನೀಡಿ ಕಾಲೇಜು ಅಧ್ಯಕ್ಷ, ಪ್ರಾಚಾರ್ಯನ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು.
ನಿನ್ನೆ ಈ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಉಪನಗರ ಠಾಣೆ ಪೊಲೀಸರೂ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದರು. ನಂತರ ಆ ವಿದ್ಯಾರ್ಥಿನಿಯರನ್ನು ಠಾಣೆಗೆ ಕರೆದುಕೊಂಡು ಹೋಗಿ ಹೆಚ್ಚಿನ ವಿಚಾರಣೆ ನಡೆಸಿ, ತಡರಾತ್ರಿ ವಿದ್ಯಾರ್ಥಿನಿಯಿಂದ ದೂರು ದಾಖಲಿಸಿಕೊಂಡಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
17/08/2022 01:52 pm