ಹುಬ್ಬಳ್ಳಿ: ಮೈಮೇಲೆ ಬಂಗಾರದ ಆಭರಣಗಳನ್ನು ನೋಡಿದರೆ ಶ್ರೀಮಂತರು ಎಂದು ಸೀರೆ ಕೊಡುವುದಿಲ್ಲ ಎಂದು ಸಹೋದರಿಯಬ್ಬರಿಗೆ ನಂಬಿಸಿದ ವಂಚಕನೊಬ್ಬ, ಅವರ ಬಳಿಯಿದ್ದ 75 ಸಾವಿರ ಮೌಲ್ಯದ ಬಂಗಾರದ ಆಭರಣಗಳನ್ನು ಪಡೆದು ಪರಾರಿಯಾಗಿರುವ ಘಟನೆ ಹುಬ್ಬಳ್ಳಿ ದಾಜೀಬಾನ್ ಪೇಟೆಯಲ್ಲಿ ನಡೆದಿದೆ.
ಗಂಗಮ್ಮ ಕರಜಗಿ ಮತ್ತು ಕಸ್ತೂರಿ ವಂಚನೆಗೊಳಗಾದವರು. ಗಂಗಮ್ಮ ಅಲ್ಲಿಯೇ ಇರುವ ಗುಡಿಯ ಕೆಲಸ ಮುಗಿಸಿ ಮನೆಗೆ ಮರಳುವಾಗ ವ್ಯಕ್ತಿಯೊಬ್ಬ ಎದುರಾಗಿ, ‘ನೀವು ಬಡವರು.
ಇಲ್ಲೊಬ್ಬರು ನಿಮಗೆ ಸೀರೆ ನೀಡುತ್ತಾರೆ’ ಎಂದು ನಂಬಿಸಿ ಸಾಲು ಓಣಿಯಲ್ಲಿರುವ ಗಜಾನನ ಕೋ–ಆಪರೇಟಿವ್ ಬ್ಯಾಂಕ್ ಬಳಿ ಕರೆದೊಯ್ದಿದ್ದಾನೆ.
ನಂತರ ಮೈಮೇಲೆ ಬಂಗಾರದ ಆಭರಣಗಳು ಇದ್ದರೆ, ಶ್ರೀಮಂತರು ಅಂದುಕೊಳ್ಳುತ್ತಾರೆ ಎಂದು ಮಾಂಗಲ್ಯ ಸರ, ಕಿವಿಯೊಲೆ, ಬಂಗಾರದ ಸರ ತೆಗೆಸಿ, ತನ್ನಲ್ಲಿದ್ದ 500 ನೋಟುಗಳಲ್ಲಿ ಸುತ್ತಿ ಅವರಿಗೆ ನೀಡಿದ್ದ.
ಮತ್ತೆ ಪುನಃ ಅದನ್ನು ಪಡೆದು ಕೆಲ ಸಮಯದ ನಂತರ ಮರಳಿಸಿ, ಸೀರೆ ನೀಡುವವರನ್ನು ಕರೆದುಕೊಂಡು ಬರುತ್ತೇನೆ ಎಂದು ತೆರಳಿದ್ದಾನೆ.
ಅರ್ಧ ಗಂಟೆ ಅವನಿಗಾಗಿ ಕಾದ ಸಹೋದರಿಯರು ಮರಳಿ ಬಂದಿಲ್ಲವೆಂದು ವಂಚಕ ಮರಳಿ ನೀಡಿದ್ದ 500 ನೋಟುಗಳನ್ನು ಬಿಚ್ಚಿದಾಗ, ಕಲ್ಲುಗಳಿದ್ದವು.
ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
23/12/2020 11:35 am