ಹುಬ್ಬಳ್ಳಿ: ಅವಳಿ ನಗರದ ಸಾರ್ವಜನಿಕರೇ ನಿಮ್ಮ ಕಾರ್ ಗಳನ್ನು ರಾತ್ರಿ ವೇಳೆ ನಿಮ್ಮ ಮನೆಯ ಮುಂದೆ ಪಾರ್ಕ್ ಮಾಡ್ತಿದಿರಾ? ನೀವು ಮನೆಯ ಮುಂದೆ ಕಾರ್ ಪಾರ್ಕ್ ಮಾಡೋದಾದ್ರೆ, ಅದರ ಬಗ್ಗೆ ಎಚ್ಚರವಿರಲಿ. ಅರೇ ಇದೇನಪ್ಪ ನಮ್ಮ ಕಾರ್ ಗಳ ಮೇಲೆ ಇವರದ್ದು ಯಾಕೆ ಇಷ್ಟು ಕಾಳಜಿ ಅಂತೀರಾ? ಈ ಸ್ಟೋರಿ ನೋಡಿ...
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಇದೀಗ ಕಾರ್ ಕಳ್ಳರ ಹಾವಳಿ ಹೆಚ್ಚಾಗಿದೆ. ರಾತ್ರಿಯಾದ್ರೆ ಸಾಕು ಬೆಲೆಬಾಳುವ ಕಾರುಗಳಿಗೆ ಖನ್ನ ಹಾಕುವ ಖತರ್ನಾಕ ಗ್ಯಾಂಗ್ ಅವಳಿ ನಗರ ಹುಬ್ಬಳ್ಳಿ- ಧಾರವಾಡದಲ್ಲಿ ಬೀಡು ಬಿಟ್ಟಿದೆ.
ಹೌದು. ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯೇ ಆರು ಕಾರು ಕಳ್ಳತನ ಪ್ರಕರಣಗಳು ದಾಖಲಾಗಿದ್ದು, ಶಾಕ್ ಮೂಡಿಸಿದೆ. ಲಿಂಗರಾಜ ನಗರದಲ್ಲಿ ಒಂದು ಕಾರನ್ನು ಕದ್ದೋಯ್ಯಲಾಗಿದೆ.
ಅಲ್ಲದೇ ವಿದ್ಯಾನಗರದ ಪ್ರಶಾಂತ ಕಾಲೋನಿಯಲ್ಲಿ ಐದು ಕಾರುಗಳನ್ನು ಕಳ್ಳತನ ಮಾಡಲು ಯತ್ನಿಸಿದ ಕಳ್ಳರು, ಕಾರು ಸ್ಟಾರ್ಟ್ ಆಗದ ಹಿನ್ನೆಲೆಯಲ್ಲಿ ಕಾರಿನಲ್ಲಿದ್ದ ದುಬಾರಿ ಬೆಲೆಯ ವಸ್ತುಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ. ದುಬಾರಿ ಬೆಲೆಯ ಸಿಸ್ಟಮ್ ಗಳನ್ನು ಕದ್ದು ಪರಾರಿ ಆಗುವ ಕಳ್ಳರು ಕಾರಿಗೆ ಹಾನಿ ಮಾಡುತ್ತಿದ್ದು, ಕಾರು ಮಾಲೀಕರ ಆತಂಕಕ್ಕೆ ಕಾರಣವಾಗಿದೆ.
ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ಮನೆ ಮುಂದೆ ಅನಿವಾರ್ಯವಾಗಿ ಕಾರು ನಿಲ್ಲಿಸುವ ಜನರೇ ಇವರ ಟಾರ್ಗೆಟ್ ಆಗಿದ್ದು, ಮಧ್ಯರಾತ್ರಿ ಕಾರುಗಳಿರುವ ನಗರಗಳಿಗೆ ಎಂಟ್ರಿ ಹೊಡೆಯುವ ಈ ಗ್ಯಾಂಗ್ ಮೊದಲಿಗೆ ಕಾರಿನ ಗ್ಲಾಸ್ ಒಡೆದು ಹಾಕುತ್ತದೆ.
ಆಮೇಲೆ ಕಾರಲ್ಲಿರೋ ವಸ್ತುಗಳನ್ನ ನೋಡಿಕೊಂಡು, ಕಾರು ಕಳ್ಳತನಕ್ಕೆ ಮುಂದಾಗುತ್ತಾರೆ. ಕಾರು ಸ್ಟಾರ್ಟ್ ಆದರೆ ಕಾರು ಎತ್ತಾಕಿಕೊಂಡು ಹೋಗಲು ಯತ್ನಿಸುತ್ತಾರೆ. ಕಾರು ಸ್ಟಾರ್ಟ್ ಆಗಲಿಲ್ಲ ಎಂದರೆ, ಕಾರಲ್ಲಿರೋ ಸಿಸ್ಟಮ್, ದುಬಾರಿ ಬೆಲೆಯ ವಸ್ತುಗಳನ್ನು ದೋಚಿಕೊಂಡು ಪರಾರಿ ಆಗ್ತಾರೆ. ಹೀಗೆ ಒಂದೇ ಏರಿಯಾದಲ್ಲಿರುವ ಐದು ಕಾರಿನ ಗ್ಲಾಸ್ ಒಡೆದು ದುಬಾರಿ ಬೆಲೆಯ ವಸ್ತುಗಳನ್ನು ಕಳ್ಳರು ದೋಚಿಕೊಂಡು ಹೋಗಿದ್ದು, ಕಾರು ಮಾಲೀಕರಿಗೆ ಮನೆಮುಂದೆ ಕಾರು ನಿಲ್ಲಿಸೋಕೆ ಆತಂಕ ಎದುರಾಗಿದೆ.
ಅಲ್ಲದೆ ಅದರಲ್ಲೂ ಅನ್ಯ ಜಿಲ್ಲೆ ರಜಿಸ್ಟ್ರೇಷನ್ ಹೊಂದಿರೋ ಕಾರ್ ಗಳು ಕಂಡ್ರೆ ಸಾಕು ಈ ಗ್ಯಾಂಗ್ ಮೊದಲು ಅವುಗಳನ್ನ ಟಾರ್ಗೇಟ್ ಮಾಡುತ್ತೆ. ಹೀಗಾಗೇ ಕತ್ತಲಾದ್ರೆ ಸಾಕು ನಗರದಲ್ಲಿ ಕಾರ್ ಕಳ್ಳರ ಹಾವಳಿಗೆ ಜನ ಬೇಸತ್ತು ಹೋಗಿದ್ದಾರೆ. ಈ ಬಗ್ಗೆ ಪೊಲೀಸರು ಕಾರು ಕಳ್ಳತನ ಪ್ರಕರಣಗಳ ಬಗ್ಗೆ ಮಾಹಿತಿ ಬಂದಿದೆ. ಈಗಾಗಲೇ ಪ್ರಕರಣಗಳ ತನಿಕೆ ನಡೆಯುತ್ತಿದ್ದು, ಆದಷ್ಟು ಕಳ್ಳರನ್ನು ಬಂಧಿಸಲಾಗುತ್ತದೆ ಅಂತಾರೆ.
ಇನ್ನು ಇಷ್ಟು ದಿನಗಳ ಕಾಲ ಬೈಕ್ ಗಳನ್ನ ಕದ್ದು ನಿದ್ದೆಗೆಡಿಸಿದ್ದ ಬೈಕ್ ಗಳ್ಳರನ್ನ ಮೊನ್ನೆಯಷ್ಟೆ ಉಪನಗರ ಪೊಲೀಸರು ಬಂಧಿಸಿದ್ರು. ಇದೀಗ ದುಬಾರಿ ಬೆಲೆಯ ಕಾರುಗಳನ್ನೇ ಕದಿಯಲು ಶುರು ಮಾಡಿದ್ದಾರೆ. ಇಂತಹ ಖತರ್ನಾಕ ಖದೀಮರ ದಂಡು ಹುಬ್ಬಳ್ಳಿಯಲ್ಲಿ ಬೀಡುಬಿಟ್ಟಿದ್ದು, ಅವಳಿ ನಗರದ ಪೊಲೀಸರು ಆದಷ್ಟು ಬೇಗ ಹಡೆಮುರಿ ಕಟ್ಟಿ ಜನರಿಗೆ ನೆಮ್ಮದಿ ನೀಡುವ ಕೆಲಸ ಮಾಡಬೇಕಿದೆ.
Kshetra Samachara
26/11/2020 05:01 pm