ಧಾರವಾಡ: ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನ ಕಂಡಿದ್ದು, ಸಂಘದ ಶತಮಾನೋತ್ಸವ ಸಮಾರಂಭ ಇಂದು ಅದ್ಧೂರಿಯಿಂದ ನೆರವೇರಿತು.
ಉಪ್ಪಿನ ಬೆಟಗೇರಿ ಗ್ರಾಮದ ಹೈಸ್ಕೂಲ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕುಮಾರ ವಿರುಪಾಕ್ಷ ಸ್ವಾಮೀಜಿ, ಮುನವಳ್ಳಿಯ ಮುರುಘರಾಜೇಂದ್ರ ಸ್ವಾಮೀಜಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶಾಸಕ ಅಮೃತ ದೇಸಾಯಿ, ಮಾಜಿ ಶಾಸಕಿ ಸೀಮಾ ಮಸೂತಿ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ತವನಪ್ಪ ಅಷ್ಟಗಿ ಅವರು ಪಾಲ್ಗೊಂಡು ಕಾರ್ಯಕ್ರಮದ ಮೆರಗು ಹೆಚ್ಚಿಸಿದರು.
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು, ಸಂಘವು ಹೊರತಂದ ಕಿರುಹೊತ್ತಿಗೆಯನ್ನು ಬಿಡುಗಡೆಗೊಳಿಸಿದರು.
ನಂತರ ಮಾತನಾಡಿದ ಅವರು, ಅನೇಕ ಸಹಕಾರಿ ಸಂಘಗಳು ದಿವಾಳಿಯಾದ ಸನ್ನಿವೇಶಗಳು ನಮ್ಮ ಮುಂದೆ ಇವೆ. ಆದರೆ, ಇದೀಗ ಮೋದಿ ಸರ್ಕಾರ ಬಂದಮೇಲೆ ಸಹಕಾರಿ ಸಂಘಗಳಿಗೆ ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಆ ಮೂಲಕ ಸಹಕಾರಿ ಸಂಘಗಳ ಬಲವರ್ಧನೆಗೆ ಒತ್ತು ಕೊಡಲಾಗಿದೆ ಎಂದರು.
ಶಾಸಕ ಅಮೃತ ದೇಸಾಯಿ ಮಾತನಾಡಿ, ಉಪ್ಪಿನ ಬೆಟಗೇರಿಯ ಸಹಕಾರಿ ಸಂಘ ಬಹಳ ಹಳೆಯದಾದ ಸಂಘ. ಈ ಸಂಘದ ಶ್ರೇಯೋಭಿವೃದ್ಧಿಗೆ ಸರ್ಕಾರದ ಮಟ್ಟದಲ್ಲಿ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ನಂತರ ಸಹಕಾರಿ ಸಂಘದಲ್ಲಿ ಸಾಲ ಸೌಲಭ್ಯ ಪಡೆದು ನಿಯಮಾನುಸಾರ ಅದನ್ನು ಮರುಪಾವತಿ ಮಾಡಿದ ರೈತರಿಗೆ ಸನ್ಮಾನಿಸಲಾಯಿತು. ಸಹಕಾರಿ ಸಂಘದಿಂದ ಸಾಲ ಸೌಲಭ್ಯ ಪಡೆದು ಟ್ರ್ಯಾಕ್ಟರ್ ತೆಗೆದುಕೊಂಡು ರೈತರಿಗೆ ಅವುಗಳನ್ನು ಹಸ್ತಾಂತರಿಸಲಾಯಿತು. ಸಂಘದ ಅಧ್ಯಕ್ಷ ರಾಮಲಿಂಗಪ್ಪ ನವಲಗುಂದ, ಉಪಾಧ್ಯಕ್ಷ ವೀರಣ್ಣ ಪರಾಂಡೆ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅನೇಕರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
Kshetra Samachara
26/12/2021 07:10 pm