ಕುಂದಗೋಳ : ಇದು ಸರ್ಕಾರ ತೆಗೆದುಕೊಂಡ ದೀರ್ಘಾವಧಿಯೋ, ರೈತರ ಇಚ್ಚಾಶಕ್ತಿ ಕೊರತೆಯೋ, ಹವಾಮಾನ ವೈಪರೀತ್ಯದ ಶಾಪವೋ ಗೊತ್ತಿಲ್ಲ. ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ತೆರೆದ ಹೆಸರು ಖರೀದಿ ಕೇಂದ್ರಕ್ಕೆ ಕೇವಲ 220 ಅರ್ಜಿ ಮಾತ್ರ ಸಲ್ಲಿಕೆಯಾಗಿವೆ.
ಸರಿಯಾಗಿ ಹೆಸರು ಒಕ್ಕಲು ಸಮಯಕ್ಕೆ ಹೆಸರು ಖರೀದಿ ಕೇಂದ್ರ ತೆರೆಯದ ಹಿನ್ನೆಲೆಯಲ್ಲಿ ರೈತರು ಖಾಸಗಿ ವರ್ತಕರಿಗೆ ತಮ್ಮ ಆರ್ಥಿಕ ಅನುಕೂಲಕ್ಕಾಗಿ ಹೆಸರು ಬೆಳೆ ಮಾರಾಟ ಮಾಡಿದ್ದಾರೆ. ಇನ್ನೂ ಅತಿವೃಷ್ಟಿ ಪರಿಣಾಮ ಹೆಚ್ಚಿನ ಬೆಳೆ ನಾಶವಾಗಿ ಹೋಗಿದ್ದು ಪ್ರತಿ ವರ್ಷ 1000 ದಿಂದ 1500 ಅರ್ಜಿ ಹೆಸರು ಖರೀದಿಗೆ ಸಲ್ಲಿಕೆಯಾಗುತ್ತಿದ್ದವು. ಈ ವರ್ಷ ಕೇವಲ 220 ಅರ್ಜಿ ಆಗಸ್ಟ್ 30 ರಿಂದ ಇಲ್ಲಿಯವರೆಗೆ ಕೇಂದ್ರಕ್ಕೆ ಬಂದಿವೆ.
ಇನ್ನೂ ರೈತರು ಎಷ್ಟೇ ಒತ್ತಾಯ ಮಾಡಿದ್ರೂ ಉದ್ದು ಖರೀದಿ ಕೇಂದ್ರ ತೆರೆಯಲು ಸರ್ಕಾರ ಮನಸ್ಸು ಮಾಡಿಲ್ಲ. ಸದ್ಯ ಉದ್ದು ಬೆಳೆದ ರೈತರು ಸಹ ಖಾಸಗಿ ವರ್ತಕರಿಗೆ ಬೆಳೆ ಮಾರಾಟ ಮಾಡುವತ್ತ ಮುಂದಾಗಿದ್ದಾರೆ.
ಇನ್ನೂ ಒಣಬೇಸಾಯದ ಭೂಮಿಯಲ್ಲಿನ ಹೆಸರು ಬೆಳೆ ನೆಚ್ಚಿ ದುಡಿಮೆಗಾಗಿ ಬಂದ ಹೆಸರು ಕಟಾವು ಯಂತ್ರಗಳು ಸಹ ಈ ವರ್ಷ ಲಾಭವಿಲ್ಲದೆ, ತಮ್ಮ ರಾಜ್ಯದತ್ತ ಹೊರಡಲು ಸಿದ್ಧವಾಗಿವೆ. ಒಟ್ಟಾರೆ ಸರ್ಕಾರದ ಬೆಂಬಲ ಬೆಲೆ ಯೋಜನೆಯ ಹೆಸರು ಖರೀದಿ ಕೇಂದ್ರ ಬಿಕೋ ಎನ್ನುತ್ತಿದ್ದರೇ, ಇತ್ತ ಉದ್ದು ಸಹ ಖಾಸಗಿ ವರ್ತಕರ ಪಾಲಾಗುತ್ತಿದೆ.
-ಪಬ್ಲಿಕ್ ನೆಕ್ಸ್ಟ್ ವಿಶೇಷ ಶ್ರೀಧರ ಪೂಜಾರ
Kshetra Samachara
22/09/2022 02:14 pm